ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರವಾಗಿದ್ದು, ಬೆಳ್ತಂಗಡಿ ತಾಲೂಕಿನ ಕೊಕ್ಕಡದಿಂದ ಸುಮಾರು 3.6 ಕಿ.ಮೀ ದೂರದಲ್ಲಿರುವುದು.
ಇಲ್ಲಿನ ಆರಾಧ್ಯ ದೇವರಾದ ಗಣಪನಿಗೆ ಗರ್ಭಗುಡಿ, ದೇವಸ್ಥಾನವಿಲ್ಲದೆ ವಿಶಾಲವಾದ ಹಚ್ಚ ಹಸುರಿನ ವಿಶಾಲವಾದ ಮೈದಾವನವನ್ನೆ ತನ್ನ ಕ್ಷೇತ್ರವಾಗಿರಿಸಿದ್ದಾನೆ. ಈ ಕ್ಷೇತ್ರವು ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಿಂದ ಸುಮಾರು 40 ಕಿ.ಮೀ, ಧರ್ಮಸ್ಥಳದಿಂದ ಸುಮಾರು 17.6 ಕಿ.ಮೀ, ಕಪಿಲ ನದಿ ತೀರದಲ್ಲಿರುವ ಪಟ್ರಮೆಯಿಂದ 6 ಕಿ.ಮೀ ದೂರದಲ್ಲಿರುವುದು. ಈ ಕ್ಷೇತ್ರದಲ್ಲಿ ನಾವು ಮುಖ್ಯವಾಗಿ ಭಕ್ತರಿಂದ ಹರಕೆಯಾಗಿ ಬಂದಿರುವ ಗಂಟೆಗಳನ್ನು ಕಾಣಬಹುದು.ಅಲ್ಲದೆ ಇಲ್ಲಿ ಕಪಿಗಳನ್ನು ಕಾಣಬಹುದು. ಈ ಕ್ಷೇತ್ರದಲ್ಲಿ ಭಕ್ತರಿಗೆ ಮಧ್ಯಾಹ್ನದ ಊಟವನ್ನು ಪ್ರಸಾದ ರೂಪದಲ್ಲಿ ನೀಡಲಾಗುವುದು.
ಸುಮಾರು 800 ವರ್ಷಗಳ ಹಿಂದೆ ಈ ಪ್ರದೇಶದ ಸಮೀಪದಲ್ಲಿ ರಾಜವಂಶಕ್ಕೊಳಪಟ್ಟ ದೇವಾಲಯವು ಸಂಗ್ರಾಮವೊಂದರಲ್ಲಿ ಅರೆಸೊತ್ತಿಗೆ ನಾಸವಾಗಿ ದೇವಾಲಯ ಧ್ವಂಸವಾಗಿತ್ತು. ಈ ದೇವಾಲಯದಲ್ಲಿ ಪೂಜಿಸಲಾಗುತ್ತಿದ್ದ ಈ ಗಣಪತಿ ವಿಗ್ರಹವು ದನಗಳನ್ನು ಕಾಯುತ್ತಿದ್ದ ಗೋಪಾಲ ಬಾಲಕರಿಗೆ ಗೋಚರವಾಯ್ತು. ಈ ಬಾಲಕರೆಲ್ಲರೂ ಸೇರಿಕೊಂಡು ಗಣಪತಿ ವಿಗ್ರಹವನ್ನು ಎತ್ತಿಕೊಂಡು ದಾರಿಯುದ್ದಕ್ಕೂ ಭಜನೆ ಪೂಜೆಗಳನ್ನು ಮಾಡುತ್ತಾ ಈಗ ಇರುವ ಮರದ ಬುಡದಲ್ಲಿ ಕಾಟುಕಲ್ಲುಗಳ ಕಟ್ಟೆ ಇಟ್ಟು ತಾವು ಬೆಳೆಯುತ್ತಿರುವ ಸೌತೆ ಮಿಡಿಗಳನ್ನು ಪ್ರತಿ ದಿನ ನೈವೇದ್ಯವನ್ನಾಗಿ ಅರ್ಪಿಸಿ ಭಜನೆ ಪ್ಪೂಜೆಗಳನ್ನು ಮಾಡತೊಡಗಿದರು. ಅಂದಿನಿಂದ ಈ ಕ್ಷೇತ್ರಕ್ಕೆ ಸೌತಡ್ಕ ಎಂದು ಹೆಸರು ಬಂತು. (ಸೌತೆ + ಅಡ್ಕ : ಅಡ್ಕ ಎಂದರೆ ಬಯಲು ಎಂದರ್ಥ)
ದೇವಸ್ಥಾನ ವಾಸ್ತು ಶಿಲ್ಪಕ್ಕನುಗುಣವಾಗಿ ಗೋಪುರ ಗರ್ಭ ಗುಡಿಗಳನ್ನು ರಚಿಸಿ ಪೂರ್ವಾಭಿಮುಖವಾಗಿ ದೇವರ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವ ಪೂರ್ವ ಸಂಪ್ರದಾಯ ನಿಯಮವಿದ್ದು, ಸೌತಡ್ಕ ಗಣಪನು ಈ ಎಲ್ಲಾ ಸಂಪ್ರಾದಯಗಳನ್ನು ತಿರಸ್ಕರಿಸಿ, ಪ್ರಕೃತಿ ಸಂದರ ತಾಣದಲ್ಲಿ ಅಗ್ನೇಯ ಮುಖವಾಗಿ, ಬಯಲೇ ಆಲಯಾವಾಗಿರಿಸಿಕೊಂಡು ಬಡವ ಶ್ರೀಮಂತರೆಂಬ ತಾರತಮ್ಯವಿಲ್ಲದೆ, ಜಾತಿ, ಮತ ಬೇಧವೆಣಿಸದೆ ಮಾನವರಿಗೂ, ಸಕಲ ಜೀವ ರಾಶಿಗಳಿಗೂ ಅಭಯ ಹಸ್ತನಾಗಿ ಹಗಲು ರಾತ್ರಿ ಅನುಗ್ರಹಿಸುತ್ತಾ ರಕ್ಷಿಸಿಕೊಂಡು ಬರುತ್ತಿರುವುದು ಸೌತಡ್ಕ ಮಹತ್ವ ಮೂಡಿಸುವ ವಿಶಿಷ್ಟ ಸಂಪ್ರದಾಯವಾಗಿರುತ್ತದೆ. ಹಿಂದೆ ಈ ಪರಿಸರದ ಶ್ರೀಮಂತ ಬ್ರಾಹ್ಮಣ ಭಕ್ತರೊಬ್ಬರು ಗಣೇಶನಿಗೆ ದೇವಸ್ಥಾನ ನಿರ್ಮಿಸಲು ತೀರ್ಮಾನಿಸಿ ಕೆಲಸ ಪ್ರಾರಂಭ ಮಾಡುವಷ್ಟರಲ್ಲಿ ಗಣಪತಿಯು ದನ ಕಾಯುವ ಹುಡುಗನ ರೂಪದಲ್ಲಿ ಆ ಬ್ರಾಹ್ಮಣನಿಗೆ ಕನಸಿನಲ್ಲಿ ಕಾಣಿಸಿಕೊಂಡು ದೇಗುಲ ನಿರ್ಮಿಸುವುದಾದರೆ ಅದರ ಗೋಪುರವು ರಾತ್ರಿ ಬೆಳಗಾಗುವುದರೊಳಗೆ ತಂದೆಯಾದ ಕಾಶಿ ವಿಶ್ವನಾಥನಿಗೆ ಕಾಣುವಷ್ಟು ಎತ್ತರದಲ್ಲಿರಬೇಕೆಂದು ಕಟ್ಟಾಜ್ಞೆ ನೀಡಿರುವುದರಿಂದ ಆ ಬ್ರಾಹ್ಮಣನಿಗೆ ಆ ಸವಾಲನ್ನು ಎದುರಿಸಲು ತೀರ ಅಸಾಧ್ಯವೆಂದು ಮನಗಂಡು ದೇಗುಲ ನಿರ್ಮಾಣದ ಯೋಜನೆಯನ್ನು ಕೈ ಬಿಡಲಾಯಿತು. ಕೆಲವು ಸಮಯಗಳ ಹಿಂದೆ ಭಕ್ತಾದಿಗಳೆಲ್ಲರೂ ಸೇರಿ ಜ್ಯೋತಿಷ್ಯರನ್ನು ಕರೆಸಿ ಅಷ್ಟಮಂಗಲ ಪ್ರಶ್ನೆಯಲ್ಲಿ ಗುಡಿಕಟ್ಟುವ ಬಗ್ಗೆ ವಿಮರ್ಶಿಸಿದಾಗ, ಗುಡಿ ಗೋಪುರ ಕಟ್ಟುವುದು ದೇವರಿಗೆ ಮನಸಿಲ್ಲವೆಂದು ಯಾವುದೇ ರೀತಿಯ ಬಂಧನಕ್ಕೆ ಅವಕಾಶ ನೀಡದೇ ಸಕಲ ಜೀವರಾಶಿಗಳಿಗೂ ಸ್ವ-ಇಚ್ಛೆಯಂತೆ ಮುಕ್ತ ಪ್ರವೇಶಕ್ಕೆ ಅವಕಾಶ ಕಾದಿರಿಸಿಕೊಂಡು ಬರತಕ್ಕದೆಂದು ತಿಳಿದು ಬಂದಿರುವುದರಿಂದ ಗುಡಿಕಟ್ಟುವ ಆಲೋಚನೆಯನ್ನು ಅಲ್ಲಿಗೆ ಕೈ ಬಿಡಲಾಯಿತು. ಹಾಗಾಗಿ ಭಕ್ತರು ಹಾಗು ತನ್ನ ನಡುವೆ ಯಾವುದೇ ಗೋಡೆ, ಬಾಗಿಲುಗಳ ಅಡ್ಡಿ ಇರಬಾರದೆಂದು ಗಣೇಶನ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ.
ಅಪಟಲ ಪ್ರೇಮ ಪಟಲಮ್ (ಮನೆಯೊಲ್ಲದವನ ಪ್ರೀತಿಯ ನೆಲೆ) ಎಂದು ಕವಿಗಳು ವರ್ಣಿಸಿರುವಂತೆ, ಗಣೇಶನು ಯಾವುದೇ ಆಡಂಬರಗಳನ್ನು ಸ್ವೀಕರಿಸುವುದಿಲ್ಲ, ಪ್ರಕೃತಿಯ ಮಡಿಲಲ್ಲಿ ಬೆಳೆದು ನಿಂತಿರುವ ಗಿಡ ಮರಗಳ ನೆರಳೇ ಆಸರೆ, ತಂಪಾದ ವನ ಸಿರಿಯ ಮಧ್ಯೆ ಚಿಲಿಪಿಲಿಗುಟ್ಟುವ ಪಕ್ಷಿಗಳ ಹಾಡು, ಗಾನ ಕೋಗಿಲೆಯ ನಾದ ಸ್ವರ, ಹಚ್ಚ ಹಸುರಿನ ಎಲೆಗಳ ಮೇಲೆ ಸೂರ್ಯ ಕಿರಣಕ್ಕೆ ಚಿನ್ನದ ಮೊಗ್ಗೆಯಂತೆ ಮಿನುಗುವ ಇಬ್ಬನಿಯ ತುಣುಕುಗಳು, ಸುತ್ತಲಿನ ಬಯಲಿನಲ್ಲಿ ಸಂತಸದಿ ಕುಣಿದಾಡುತ್ತಿರುವ ಗೋವುಗಳು, ಹೀಗೆ ಹತ್ತು ಹಲವು ಪ್ರಕೃತಿ ಸೌಂದರ್ಯ ರಾಶಿಗಳ ಮಧ್ಯೆ ಗೋಪಾಲ ಬಾಲಕರು ನೈವೇಧ್ಯವಾಗಿ ತಂದೊಪ್ಪಿಸುವ ಸೌತೆ ಮಿಡಿಗಳನ್ನು ಸ್ವೀಕರಿಸುತ್ತಾ ಸಂತಸದಿಂದ ನೆಲೆಯಾಗಿರುವ ಗಣೇಶನು ಸೌತಡ್ಕ ಪುಣ್ಯ ಕ್ಷೇತ್ರದಲ್ಲಿ ಹೊರತು ಬೇರೆಲ್ಲಿಯೂ ಕಾಣಸಿಗಲಾರದು.
ನಿತ್ಯಾನುಷ್ಠಾನ |
ಬೆಳಿಗ್ಗೆ: ಪ್ರತಿದಿನ ಬೆಳಿಗ್ಗೆ ಅಭಿಷೇಕ ಮಾಡಿ, ಹಣ್ಣು ಕಾಯಿ, ಅವಲಕ್ಕಿ ಪಂಚಕಜ್ಜಾಯ ಸಮರ್ಪಣೆ ಮಾಡಿ 07:15 ಕ್ಕೆ ಬೆಳಗ್ಗಿನ ಪೂಜೆಯನ್ನು ಮಾಡುವುದು. |
ಮದ್ಯಾಹ್ನ : ಮದ್ಯಾಹ್ನ ಒಂದು ಸೇರು ಬೆಳ್ತಿಗೆ ಅಕ್ಕಿಯ ನೈವೇಧ್ಯ, ಹಣ್ಣು ಕಾಯಿ, ತಾಂಬೂಲಾದಿಗಳನ್ನು ಸಮರ್ಪಣೆ ಮಾಡಿ ಮದ್ಯಾಹ್ನ ಗಂಟೆ 12:15 ಕ್ಕೆ ಸರಿಯಾಗಿ ಮಹಾಪೂಜೆಯನ್ನು ಮಾಡುವುದು. |
ರಾತ್ರಿ: ರಾತ್ರಿ 07:15 ಕ್ಕೆ ಹಣ್ಣು ಕಾಯಿ, ಪಂಚಕಜ್ಜಾಯ ನೈವೇಧ್ಯವಾಗಿ ಮಹಾಪೂಜೆ ಜರುಗುವುದು. |
ವಿಶೇಷ ಉತ್ಸವಾದಿಗಳು
1. ಪ್ರತಿ ದಿನ 1 ತೆಂಗಿನ ಕಾಯಿಯ ಗಣಹೋಮ ನಡೆಸಲ್ಪಡುತ್ತದೆ.2.ಗಣೇಶ ಚತುರ್ಥಿ: ಗಣೇಶ ಚೌತಿಯಂದು 108 ತೆಂಗಿನ ಕಾಯಿಗಳ ಗಣಹೋಮ ಮಾಡಿ, ಶ್ರೀ ದೇವರಿಗೆ ಪಂಚಾಮೃತದೊಂದಿಗೆ 108 ಸೀಯಾಳ ಅಭಿಷೇಕ ಮಾಡಿ, ಅಪ್ಪ ಕಜ್ಜಾಯ, ಪಾಯಸ, ನೈವೇಧ್ಯ ಮತ್ತು ಹಣ್ಣು ಹಂಪಲು ತಾಂಬೂಲಾದಿಗಳನ್ನು ಸಮರ್ಪಣೆ ಮಾಡಿ ಗಂಟೆ 12:30ಕ್ಕೆ ಮಹಾಪೂಜೆ ಮಾಡುವುದು. ಆ ಬಳಿಕ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯುತ್ತದೆ. 3. ಮಾಘ ಶುದ್ಧ ಚೌತಿ: ಮಾಘ ಶುದ್ಧ ಚೌತಿ ದಿನವು ಈ ಕ್ಷೇತ್ರದ ವಾರ್ಷಿಕ ವಿಶೇಷ ದಿನವಾಗಿರುತ್ತದೆ. ಸದ್ರಿ ವಿಶೇಷ ದಿನ 108 ಕಾಯಿ ಗಣಹೋಮ, ಅಥರ್ವಶೀರ್ಷ ಸಹಸ್ರಾವರ್ತನ ಅಭಿಷೇಕ ಮಾಡಿ, ಗಣಹೋಮ ಕಲಶಾಭಿಷೇಕವಾದ ಮೇಲೆ ನೈವೇಧ್ಯ, ಹಾಲು-ಪಾಯಸ, ಮೋದಕ, ಪಂಚಕಜ್ಜಾಯ, ಹಣ್ಣು ಹಂಪಲು, ತಾಂಬೂಲಾದಿ ಸಮರ್ಪಣೆಯಾದ ಬಳಿಕ 12:30 ಕ್ಕೆ ಮಹಾಪೂಜೆ ನಡೆಸಲ್ಪಡುತ್ತದೆ. ಮದ್ಯಾಹ್ನ ಗಂಟೆ 1 ರಿಂದ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯುತ್ತದೆ. ಸಾಯಂಕಾಲ ಘಂಟೆ 5 ರಿಂದ ಸಾಂಸ್ಕೃತಿಕ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮಗಳು ಜರುಗುತ್ತದೆ. ರಾತ್ರಿ ಗಂಟೆ 7 ರಿಂದ ಶ್ರೀ ದೇವರಿಗೆ ಮೂಡಪ್ಪ ಸೇವೆ ಮತ್ತು ಮಹಾ ರಂಗ ಪೂಜಾ ಕಾರ್ಯಕ್ರಮಗಳು ನಡೆಸಲ್ಪಡುತ್ತದೆ. ಗಂಟೆ 10 ರಿಂದ ಮನರಂಜನಾ ಕಾರ್ಯಕ್ರಮಗಳು ಜರಗುತ್ತದೆ. |
ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ : ಮಾರ್ಗಸೂಚಿ
ದೇವಸ್ಥಾನದ ಅಂಚೆ ವಿಳಾಸ
ಶ್ರೀ ಮಹಾಗಣಪತಿ ದೇವಸ್ಥಾನ , ಸೌತಡ್ಕ
ಕೊಕ್ಕಡ,
ಬೆಳ್ತಂಗಡಿ ತಾಲೂಕು,
ದಕ್ಷಿಣ ಕನ್ನಡ ಜಿಲ್ಲೆ-574 198
ದೂರವಾಣಿ ಸಂಖ್ಯೆ
08251 – 202161
08251 – 202361
ಇಮೈಲ್: [email protected]
ಶ್ರೀ ಕ್ಷೇತ್ರದಿಂದ ಇತರ ಪ್ರಮುಖ ನಗರಗಳಿರುವ ದೂರ
ಮಂಗಳೂರು | 82.2 ಕಿ.ಮೀ |
ಧರ್ಮಸ್ಥಳ | 17.6 ಕಿ.ಮೀ |
ಕುಕ್ಕೆ ಸುಬ್ರಹ್ಮಣ್ಯ | 40 ಕಿ.ಮೀ |
ಹಾಸನ | 101 ಕಿ.ಮೀ |
ಬೆಂಗಳೂರು | 283 ಕಿ.ಮೀ |
ಮೈಸೂರು | 210 ಕಿ.ಮೀ |
ಉಡುಪಿ | 123 ಕಿ.ಮೀ |
ಚಿಕ್ಕಮಗಳೂರು | 104 ಕಿ.ಮೀ |
ಅಂತರಾಷ್ಟೀಯ ವಿಮಾನ ನಿಲ್ದಾಣ, ಮಂಗಳೂರು | 88 ಕಿ.ಮೀ |
ರೈಲು ನಿಲ್ದಾಣ, ಸುಬ್ರಹ್ಮಣ್ಯ ಜಂಕ್ಷನ್ | 29 ಕಿ.ಮೀ |
ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ : ಹತ್ತಿರದ ಪ್ರಮುಖ ಪ್ರವಾಸಿ ತಾಣಗಳು
|