ಗುಂಡ್ಯ ಹೊಳೆಯ ಸನಿಹದಲ್ಲಿರುವ ನೂಜಿಬಾಳ್ತಿಲ ಗ್ರಾಮ ದಲ್ಲಿರುವ ಅತೀ ಪುರಾತನವಾದ ದೇವಸ್ಥಾನವೇ ಕುರಿಯಾಳ ಕೊಪ್ಪದ ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನ. ಈ ದೇವರ ಸಾನಿಧ್ಯಕ್ಕೆ ಸುಮಾರು ೬೦೦ ವರ್ಷಗಳ ಇತಿಹಾಸ ವಿದೆ ಎಂದು ಅಷ್ಟಮಂಗಲದಿಂದ ತಿಳಿದುಬಂದಿದೆ. ಶ್ರೀ ದೇವರ ಹೆಸರಿನಲ್ಲಿ ೨.೨೬ ಎಕ್ರೆ ಜಾಗವಿರುತ್ತದೆ.ಶ್ರೀ ದೇವರ ಮೂಲ ಮೂರ್ತಿಯನ್ನು ದೇವಾಲಯ ಶಿಥಿಲಾವಸ್ಥೆಯಲ್ಲಿದ್ದ ಕಾರಣ ಶ್ರೀ ಸುಬ್ರಹ್ಮಣ್ಯ ಮಠದ ಮುಖೇನ ಶ್ರೀ ಧರ್ಮಸ್ಥಳದ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿದೆ ಎಂದು ಅಷ್ಟಮಂಗಲದಿಂದ ತಿಳಿದುಬಂದಿತ್ತು .ಅಷ್ಟಮಂಗಲ ಪ್ರಶ್ನೆಯಲ್ಲಿ ತೋರಿ ಬಂದ ದೋಷಗಳ ಪರಿಹಾರ ಕಾರ್ಯವನ್ನು ಮಾಡಿ, ಒಂದು ಬಾಲಾಲಯವನ್ನು ಕಟ್ಟಿ, ಅದರಲ್ಲಿ ಶ್ರೀ ದೇವರ ಪ್ರತಿಮೂರ್ತಿಯೊಂದನ್ನು ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ಮುಖೇನ ಪ್ರತಿಷ್ಠಾಪಿಸಿ, ನಿತ್ಯ ಪೂಜೆಯನ್ನು ನಡೆಸಿಕೊಂಡು ಬರಲಾಗುತಿತ್ತು. ಪ್ರತೀದಿನ ಶ್ರೀ ದೇವರ ನಿತ್ಯ ಪೂಜೆಯು ಬೆಳಗ್ಗೆ ಗಂಟೆ ೮.೩೦ರಿಂದ ೯.೩೦ರ ಒಳಗೆ ನೆರವೇರಿಸಿದರು .
ಜೀರ್ಣೋದ್ಧಾರಕ್ಕೆ ಆರಂಭ ಎಂಬಂತೆ ಶ್ರೀ ನಾಗದೇವರ ಪ್ರತಿಷ್ಠಾಪನೆಯನ್ನು ಮಾಡಿ ,ಸದ್ರಿ ದೇವಾಲಯವು ಜೀರ್ಣೋದ್ಧಾರ ಮಾಡಬೇಕೆಂದು ತೀರ್ಮಾನಿಸಿ, ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ಮಾರ್ಗದರ್ಶನದೊಂದಿಗೆ, ಶಾಸಕರಾದ ಎಸ್. ಅಂಗಾರರವರ ಗೌರವಾಧ್ಯಕ್ಷತೆಯಲ್ಲಿ ಜೀರ್ಣೋದ್ಧಾರ ಸಮಿತಿಯನ್ನು ರಚಿಸಿ ಇತ್ತೀಚೆಗೆ ನವೀಕರಣಗೊಂಡು ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ನೆರವೇರಿದೆ.ಈಗ ದಿನನಿತ್ಯ ಪೂಜಾ ವಿಧಾನಗಳು ಸುಸೂತ್ರವಾಗಿ ನಡೆದುಕೊಂಡು ಬರುತ್ತಿದ್ದು, ಜನರ ಇಷ್ಟಾರ್ಥಗಳನ್ನು ಸದಾ ನೆರವೇರಿಸುತ್ತಾ ಕುರಿಯಾಳ ಕೊಪ್ಪದಲ್ಲಿ ನೆಲೆಸಿದ್ದಾರೆ. ಕ್ಷೇತ್ರದಲ್ಲಿ ದಿನನಿತ್ಯ ಬೇರೆ ಬೇರೆ ಸೇವಾ ಕಾರ್ಯಗಳು ನಡೆಯುತ್ತಿದೆ.
Shree Lakshmi Janardhana Temple Kuriyala Koppa
Ichlampady Road
Kadaba Taluk ,Noojibalthila Village, Karnataka 574221