ಪುತ್ತೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕ ಇದರ ಆಶ್ರಯದಲ್ಲಿ ದ.ಕ.ಜಿ.ಪಂ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಪುತ್ತೂರು ಇವರ ಸಹಕಾರದೊಂದಿಗೆ ತಾಲೂಕಿನ ಎಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತಯಾರಿ ಮಾಡುವ ಬಗ್ಗೆ ಮತ್ತು ಪರೀಕ್ಷೆಯನ್ನು ಎದುರಿಸುವ ಬಗ್ಗೆ ತರಬೇತಿ ಕಾರ್ಯಕ್ರಮ ‘ವಿದ್ಯಾ ಸ್ಫೂರ್ತಿ-2024’ ಜ.12 ರಂದು ಬೆಳಿಗ್ಗೆ ಪುತ್ತೂರು-ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ಜರಗಿತು. ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಪೂಜಾರಿ ಕೆ.ರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಯುವವಾಹಿನಿ ಸಂಘಟನೆಯು ವಿದ್ಯಾರ್ಥಿಗಳ ಭವಿಷ್ಯ ಒಳ್ಳೆಯದಾಗಲಿ ಎಂದು ಈ ಕಾರ್ಯಕ್ರಮ ಆಯೋಜನೆ ಮಾಡಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಈ ಶಿಬಿರದ ಪ್ರಯೋಜನ ಪಡೆದುಕೊಂಡು ಉಜ್ವಲ ಭವಿಷ್ಯ ನಿಮ್ಮದಾಗಿಸಿಕೊಳ್ಳಿ ಎಂದರು.
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಮಾತನಾಡಿ,ವಿದ್ಯಾಸ್ಫೂರ್ತಿ ಯೋಜನೆಯಡಿ ಯುವವಾಹಿನಿ ಸಂಘಟನೆಯು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳು ಸ್ಪೂರ್ತಿಯಿಂದ, ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ಪರೀಕ್ಷೆಯನ್ನು ಧೈರ್ಯದಿಂದ ಎದುರಿಸುವವರಾಗಬೇಕು ಎಂದರು. ಪುತ್ತೂರು ನಗರಸಭಾ ಆಯುಕ್ತ ಮಧು ಎಸ್.ಮನೋಹರ್ ಮಾತನಾಡಿ, ಇಂದಿನ ಮಕ್ಕಳು ಮುಂದಿನ ಪ್ರಜೆಗಳು. ವಿದ್ಯಾರ್ಥಿಗಳು ಪರೀಕ್ಷೆಗೆ ಪೂರ್ವ ತಯಾರಿಯೊಂದಿಗೆ ಮಾನಸಿಕವಾಗಿ ಸಿದ್ಧರಾಗಬೇಕು. ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯದಲ್ಲಿ ಏನಾಗಬೇಕು ಎನ್ನುವ ಧ್ಯೇಯವನ್ನು ಈಗಲೇ ಮೈಗೂಡಿಸಿಕೊಂಡು ಹೆಜ್ಜೆ ಇಡುವವರಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ಜಯರಾಮ ಬಿ.ಎಸ್ ಮಾತನಾಡಿ, ಯುವವಾಹಿನಿ ಪುತ್ತೂರು ಘಟಕವು ವರ್ಷಂಪ್ರತಿ ವಿದ್ಯಾ ಸ್ಫೂರ್ತಿ ಧ್ಯೇಯದಡಿಯಲ್ಲಿ ತಾಲೂಕಿನ ಎಸೆಸ್ಸೆಲ್ಸಿ ಪರೀಕ್ಷೆಯನ್ನು ಹೇಗೆ ಎದುರಿಸುವ ಬಗ್ಗೆ ಒಳ್ಳೆಯ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದೆ. ಮಾತ್ರವಲ್ಲ ತಾಲೂಕಿನ ಹಲವು ಪ್ರೌಢಶಾಲೆಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉತ್ಸುಕರಾಗಿ ಭಾಗವಹಿಸಿರುವುದು ನಮಗೆ ಖುಷಿ ತಂದಿದ್ದು ಉಜ್ವಲ ಭವಿಷ್ಯ ನಿಮ್ಮದಾಗಲಿ ಎಂದರು. ಯುವವಾಹಿನಿ ಪುತ್ತೂರು ಘಟಕದ ಕಾರ್ಯದರ್ಶಿ ಸಮಿತ್ ಪಿ. ಸ್ವಾಗತಿಸಿ, ವಿದ್ಯಾನಿಧಿ ನಿರ್ದೇಶಕ ರವಿಕುಮಾರ್ ಕೆ ವಂದಿಸಿದರು. ಅವಿನಾಶ್ ಹಾರಾಡಿ ಹಾಗೂ ಪ್ರಿಯಾಶ್ರೀ ಕಾರ್ಯಕ್ರಮ ನಿರೂಪಿಸಿದರು.
ಪರೀಕ್ಷೆಯನ್ನು ಇಷ್ಟಪಟ್ಟು ಎದುರಿಸುವವರಾಗಿ..
ಪ್ರತಿ ವರ್ಷ ಜ.12 ರಂದು ರಾಷ್ಟ್ರೀಯ ಯುವ ದಿನಾಚರಣೆಯನ್ನು ಆಚರಿಸಿಕೊಳ್ಳಲಾಗುತ್ತಿದೆ. ಯುವಸಮೂಹಕ್ಕೆ ಸ್ಪೂರ್ತಿ ಕೊಟ್ಟಂತಹ, ಜಗತ್ತಿಗೆ ಅಧ್ಯಾತ್ಮಿಕತೆಯನ್ನು ಪರಿಚಯಿಸಿದವರು ಸ್ವಾಮಿ ವಿವೇಕಾನಂದರು. ಅವರ ಜನ್ಮದಿನಾಚರಣೆಯನ್ನು ಇಂದು ನಾವು ಸಂತೋಷದಿಂದ ಆಚರಿಸುತ್ತಿದ್ದೇವೆ. ವಿದ್ಯಾರ್ಥಿಗಳು ಪರೀಕ್ಷೆಯನ್ನು ಕಷ್ಟದಿಂದ ಎದುರಿಸುವವರಾಗದೆ ಬಹಳ ಇಷ್ಟಪಟ್ಟು ಎದುರಿಸುವವರಾಗಬೇಕು. ತಾನು ಸಾಧಿಸಬಲ್ಲೆ ಎಂಬ ಅಚಲ ನಿರ್ಧಾರ, ಆತ್ಮವಿಶ್ವಾಸ, ಗುರಿಯನ್ನು ಹೊಂದಿದ್ದಲ್ಲಿ ಉಜ್ವಲ ಭವಿಷ್ಯ ನಿಮ್ಮದಾಗುವುದು. ಪುತ್ತೂರಿನ ವಿದ್ಯಾರ್ಥಿಗಳು ಬಹಳ ಪ್ರತಿಭಾವಂತರು ಹಾಗೂ ಬುದ್ಧಿವಂತರು. ಆದ್ದರಿಂದ ವಿದ್ಯಾರ್ಥಿಗಳು ಉತ್ತಮವಾಗಿ ಪರೀಕ್ಷೆಯನ್ನು ಎದುರಿಸಿ ಉತ್ತಮ ಅಂಕ ಗಳಿಸುವವರಾಗಿ.
ರಾಜೇಂದ್ರ ಭಟ್, ಅಂತರ್ರಾಷ್ಟ್ರೀಯ ತರಬೇತುದಾರರು, ಜೇಸಿಐ ಸಂಸ್ಥೆ.