ಭೂತಕೋಲ

ಶೇರ್ ಮಾಡಿ

ಭೂತಕೋಲ ಎನ್ನುವುದು ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಚಲಿತವಿರುವ ಒಂದು ಜಾನಪದ ಧಾರ್ಮಿಕ ಆಚರಣೆ. ಇದಕ್ಕೆ ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸವಿದೆ. ಇದರಲ್ಲಿ ಹಲವು ನಮೂನೆಗಳಿವೆ. ಇದರಲ್ಲಿ ಸಾಮಾನ್ಯವಾಗಿ ದೈವ ಎಂಬ ಹೆಸರಿನಿಂದ ಕರೆಯಲ್ಪಡುವ ಶಕ್ತಿಯ ಆರಾಧನೆ ನಡೆಯುತ್ತದೆ. ಹಲವು ಹೆಸರಿನ ದೈವಗಳಿವೆ. ಉದಾಹರಣೆಗೆ ಕಲ್ಕುಡ, ಕಲ್ಲುರ್ಟಿ, ಪಂಜುರ್ಳಿ, ಪಿಲಿಫೂತ, ಪಿಲಿಚಾಮುಂಡಿ, ಬೊಬ್ಬರ್ಯ, ಜುಮಾದಿ, ಧೂಮಾವತಿ (ಬಬ್ಬು), ವಿಷ್ಣುಮೂರ್ತಿ, ಕೋಟಿಚೆನ್ನಯ, ಇತ್ಯಾದಿ.

ಭೂತಕೋಲ ಎನ್ನುವುದು ಭೂತಾರಾಧನೆಯ ಒಂದು ಪ್ರಮುಖ ಅಂಗ

ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ವಿಶಿಷ್ಟವಾಗಿ ಕಂಡುಬರುವ ಸಂಪ್ರದಾಯ `ಭೂತಾರಾಧನೆ’. ದುಷ್ಟಶಕ್ತಿಗಳಾದ ದೆವ್ವ, ಪೀಡೆ, ಪಿಶಾಚಿಗಳ ತೊಂದರೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಅವುಗಳನ್ನು ಒಲಿಸಿಕೊಳ್ಳಲು ಭಯಭಕ್ತಿಯಿಂದ ಪೂಜಿಸುವುದೇ ಭೂತಾರಾಧನೆ.
ಆಯುಸ್ಸು ಮುಗಿಯುವ ಮುನ್ನ ಯಾರಾದರೂ ಸಾವನ್ನಪ್ಪಿದರೆ ಅವರ ಜೀವ ಪ್ರೇತವಾಗುತ್ತದೆ ಎಂದೂ, ಆ ಪ್ರೇತಗಳು ಇಲ್ಲೇ ಓಡಾಡುತ್ತಾ ಜನರ ಮೇಲೆ, ಪ್ರಾಣಿಗಳ ಮೇಲೆ ತಮ್ಮ ಕಾಕದೃಷಿಯನ್ನು ಬೀರಿ ರೋಗರುಜಿನಗಳನ್ನು ತಂದೊಡ್ಡಿ ತೊಂದರೆ ಕೊಡುತ್ತವೆ ಎಂದೂ ಗ್ರಾಮೀಣರು ನಂಬಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ಅವುಗಳನ್ನು ಸಂತೃಪ್ತಿಗೊಳಿಸುವ ಮಾರ್ಗವೇ `ಭೂತಾರಾಧನೆ’ಯಾಗಿ ರೂಪುಗೊಂಡಿದೆ. ಆ `ಭೂತ’ಗಳೇ ದೈವವಾಗಿ ಕಂಡಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರ ಕಷ್ಟಗಳನ್ನು ನಿವಾರಿಸುವ, ತಮ್ಮ ಬಯಕೆಗಳನ್ನು ಈಡೇರಿಸುವ ಹತ್ತಾರು `ಭೂತ’ಗಳು ವಾಸವಾಗಿವೆ. ಇವುಗಳಿಗೆ ಅಲ್ಲಲ್ಲಿ ಗುಡಿಗಳನ್ನು ಕಟ್ಟಿ ಭೂತಗಳನ್ನು ಪೂಜಿಸುತ್ತಾ ಬಂದಿದ್ದಾರೆ. ಈ ಪೂಜೆಯನ್ನು ನೇಮ, ಕೋಲ, ತಂಬಲ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಬೇರೆ ಬೇರೆ ಭೂತಗಳಿಗೆ ಬೇರೆ ಬೇರೆ ವಿಧಾನದಲ್ಲಿ ಪೂಜೆಸಲ್ಲಿಸುತ್ತಾರೆ. ಇಂತಿಂಥ ಭೂತಗಳಿಗೆ ಇಂತಿಂಥ ಪೂಜಾರಿಯೇ ಇರಬೇಕೆಂಬ ನಿಯಮವಿದೆ. ಪೂಜಾರಿಗಳಲ್ಲಿ ಪರವ, ನಳಿಕೆ, ಪಂಬದ, ಪಾಣಾರು ಮುಂತಾದ ಜಾತಿಗಳಿವೆ.
ಒಂದೊಂದು ಭೂತಕ್ಕೂ ತನ್ನದೇ ಆದ ಇತಿಹಾಸವಿದೆ. ಒಂದು ಮತ್ತೊಂದಕ್ಕಿಂತ ಭಿನ್ನವಾಗಿರುವಂತೆ ಆರಾಧನೆಯೂ ಭಿನ್ನವಾಗಿರುತ್ತದೆ. ಹೆಣ್ಣು ಭೂತ `ಕೊರತ್ತಿ’ಯನ್ನು ಹಲವು ಕಡೆ ಕೆಲವು ಮನೆತನಗಳಲ್ಲಿ ಹೆಂಗಸೆರೇ ಆರಾಧಿಸುವ ಸಂಪ್ರದಾಯವಿದೆ. ಈ ಕೊರತ್ತಿ ಭೂತದ ಕೋಲವನ್ನು (ಕೋಲ ಎಂದರೆ ಮೆರವಣಿಗೆ ಎಂಬರ್ಥವಿದೆ) ಕಟ್ಟುವವರು ಹರಿಜನವರ್ಗಕ್ಕೆ ಸೇರಿದ ಅಜಲರು ಅಥವಾ ನಳಿಕೆ ಜನಾಂಗದವರಾಗಿರುತ್ತಾರೆ. ಇವರು ಕಾಲಿಗೆ ಸಣ್ಣ ಗಗ್ಗರ, ಹಣೆಗೆ ವಿಭೂತಿ, ಕಣ್ಣಿಗೆ ಕಾಡಿಗೆ ಮುಂತಾದ ವೇಷಭೂಷಣಗಳಿಂದ ಅಲಂಕರಿಸಿಕೊಂಡಿರುತ್ತಾರೆ.

`ಕೊರಗ ತನಿಯ’ ಭೂತವನ್ನು ಆರಾಧಿಸುವವರು ಸೊಂಟದ ಕೆಳಗಭಾಗದಲ್ಲಿ ತೆಂಗಿನ ಸಿರಿಯಿಂದ ಅಲಂಕರಿಸಿಕೊಂಡಿರುತ್ತಾರೆ. ಮೈ ಮತ್ತು ಕೈಗಳಿಗೆ ಬಿಳಿಯ ಪಟ್ಟಿಗಳನ್ನು ಬಳಿದುಕೊಂಡಿರುತ್ತಾರೆ. ಕೈಯಲ್ಲಿ ಬೆಳ್ಳಿಯ ಬೆತ್ತ, ತಲೆಗೆ ಚಿನ್ನದ ಮುಟ್ಟಾಳೆ, ಸೊಂಟಕ್ಕೆ ಗೆಜ್ಜೆಯ ಪಟ್ಟಿ, ಕಾಲಿಗೆ ಗಗ್ಗರವನ್ನು ಹಾಕಿಕೊಂಡಿರುತ್ತಾರೆ. ನಳಿಕೆ ಜನಾಂಗದವರು ಪೂಜಿಸುವ ಕೊರಗತನಿಯಕ್ಕೆ ಕೋಲದ ಸಮಯದಲ್ಲಿ ನೈವೇದ್ಯ ರೂಪದಲ್ಲಿ ಕಳ್ಳು, ಸರಾಯಿ, ಅನ್ನ, ಕೋಳಿಮಾಂಸವನ್ನು ಕೊಡುತ್ತಾರೆ. ತೆಂಬರೆ ವಾದ್ಯಕ್ಕನುಗುಣವಾಗಿ ಭೂತವೇಷಧಾರಿ ಅರ್ಭಟಿಸುತ್ತಾ ಕುಣಿಯುತ್ತಾನೆ.

See also  ದೈಯೊಂಕುಲು ಗುಡ್ಡೆ ,ಇಚಿಲಂಪಾಡಿ

ದಿನನಿತ್ಯದ ವ್ಯವಹಾರಗಳಲ್ಲಿ ಕಚ್ಚಾಟ ಬಂದು ಮರಣ ಹೊಂದಿದರೆ ವ್ಯಕ್ತಿ `ಆಲಿ ಭೂತ’ವಾಗುತ್ತಾನೆ ಎಂಬ ನಂಬಿಕೆ ಇದೆ. ಈ ಭೂತ ವ್ಯವಹಾರಗಳ ಮೂಲಕ ತೊಂದರೆ ಕೊಡುತ್ತದೆ. ಆದ್ದರಿಂದ ತಪ್ಪಿಸಿಕೊಳ್ಳಲು ಅದರ ಮೊರೆಹೋಗುತ್ತಾರೆ.

ಸಾಮಾನ್ಯವಾಗಿ ವರ್ಷಕ್ಕೊಮ್ಮೆ ನಡೆಯುವ ಈ ಆರಾಧನೆ `ಬಂಬ್ರಾಣ’ ಎಂಬ ಮನೆತನದವರಿಂದ ಪ್ರಾರಂಭವಾಗುತ್ತದೆ. ಅಲಿ ಭೂತದ ವೇಷ ಧರಿಸಿದ ಕಲಾವಿದನಿಗೆ ದರ್ಶನ ಬಂದಾಗ ಮಸೀದಿಗಳಲ್ಲಿ ಮುಸ್ಲಿಮರು ನಮಾಜು ಮಾಡುವಂತೆ ಮಾಡುತ್ತಾನೆ. ಈ ಭೂತಕ್ಕೆ ಎರಡು ಅಡಿ ಎತ್ತರ, ನಾಲ್ಕು ಅಡಿ ಉದ್ದವಿರುವ ಪೀಠವಿರುತ್ತದೆ. ಈ ಪೀಠವನ್ನು `ಮಂಚ’ ಎಂದು ಕರೆಯುತ್ತಾರೆ. ಹರಕೆ ಹೇಳಿಕೊಂಡ ಒಬ್ಬೊಬ್ಬೊರನ್ನು ಭೂತನು ಕರೆದು ತನ್ನ ಪೀಠದ ಬಳಿಇ ಕೂರಿಸಿಕೊಂಡು ಅಭಯ ನೀಡುತ್ತಾನೆ.

ವರಹಾವತಾರವೇ `ಪಂಜುರುಳಿ’ ಭೂತವಾಗಿದೆ ಎಂದು ಕಲ್ಪನೆಯಿದೆ. ಅಲ್ಲದೆ ಭೂತಾರಾಧನೆಯ ಪಂಜನ್ನು ಉರುಳಿಸಿ ಕುಣಿಯುವುದರಿಂದ `ಪಂಜುರುಳಿ’ ಎಂದು ಹೆಸರು ಬಂದಿದೆ ಎಂದು ಹೇಳುತ್ತಾರೆ. ಈ ಭೂತವನ್ನು ಕಟ್ಟುವವರು ಆರಾಧನೆಯ ಸಂದರ್ಭದಲ್ಲಿ ತಲೆಗೆ ಪೇಟ, ಭುಜಕೀತಿ, ನಡುಪಟ್ಟಿ, ಕಿರೀಟ ಮತ್ತು ಹಂದಿಯ ಮುಖವಾಡವನ್ನು ಧರಿಸುತ್ತಾರೆ. ಬಲಗೈಯಲ್ಲಿ ಕತ್ತಿ, ದೀಪ, ಎಡಗೈಯಲ್ಲಿ ಮಣಿ, ಕಾಲಿಗೆ ಗಗ್ಗರ, ತೆಂಗಿನಸಿರಿ ಕೆಂಪು ನಿಲುವಂಗಿಯಿಂದ ಅಲಂಕರಿಸಿಕೊಂಡಿರುತ್ತಾರೆ. ಈ ಸಂದರ್ಭದಲ್ಲಿ ಕೊಂಬು, ಕಹಳೆ, ನಾಗಸ್ವರ, ತೆಂಬರೆ ವಾದ್ಯಗಳ ಗತ್ತಿಗೆ, ನಡಿಗಟ್ಟನ್ನು ಪ್ರಾರಂಭಿಸಿ ಭೂತದ ಹುಟ್ಟು, ಬೆಳವಣಿಗೆ, ಇತಿಹಾಸ, ಪ್ರವಾಸ, ಕೈಗೊಂಡ ಸಾಧನೆ ಮುಂತಾದುವುಗಳನ್ನು ಹೇಳುತ್ತಾರೆ. ಇದಕ್ಕೆ `ಕಾಲೂರಿ ಮೂಲ` ಎನ್ನುತ್ತಾರೆ.

`ಕಲ್ಕುಡ ಮತ್ತು ಕಲ್ಲುರ್ಟಿ’ ಭೂತಗಳು ಪ್ರಖ್ಯಾತವಾಗಿವೆ. ಇವರಿಬ್ಬರು ಅಣ್ಣತಂಗಿಯರು. ಇವುಗಳ ಆರಾಧನೆ ವರ್ಷಕ್ಕೊಮ್ಮೆ ನಡೆಯುತ್ತದೆ. ಹರಿಜನ ವರ್ಗಗಳಾದ `ಪರವರು ಮತ್ತು ಪಂಬದವರು’ ಭೂತ ಕಟ್ಟುತ್ತಾರೆ. ಕೆಂಪು ನಿಲುವಂಗಿ, ಕೈಪಟ್ಟಿ, ನಡುಪಟ್ಟಿ, ಸರಪಳಿ, ಪಲ್ಲೆ, ನೇವಳ, ಕಾಲಿಗೆ ಗಗ್ಗರ, ಶಿರೋಭೂಷಣ, ತೆಂಗಿನಸಿರಿ, ಇವು ಭೂತ ಕಟ್ಟುವವರ ವೇಷಭೂಷಣಗಳು. ಕಲ್ಕುಡ ಭೂತವನ್ನು `ಪೊಸಭೂತ’ ಎಂದೂ ಕಲ್ಲುರ್ಟಿಯನ್ನು `ಸತ್ಯದೇವತೆ’ಯೆಂದೂ ಕರೆಯುತ್ತಾರೆ.

`ಕುಪ್ಪೆ ಪಂಜುರ್ಲಿ’ ಎಂಬ ಮತ್ತೊಂದು ಭೂತವಿದೆ. ಇದರ ಆರಾಧನೆ ಸಂದರ್ಭದಲ್ಲಿ ಕೋಲ ಕಟ್ಟುವವನಿಗೆ ದರ್ಶನ ಬಂದಾಗ ಪ್ರತಿ ನುಡಿಗಟ್ಟಿಗೂ ಕುಪ್ಪಳಿಸುತ್ತಾ ಇರುತ್ತಾನೆ. ಪ್ರಾರಂಭದಿಂದ ಕೊನೆಯವರೆಗೂ ದರ್ಶನದಾರಿಯು ಕುಪ್ಪಳಿಸುತ್ತಾ ಪಾಡ್ದನ ಹಾಡುತ್ತಾ, ಪೂಜಾ ವಿಧಿಗಳ ಹರಕೆ, ಕಾಣಿಕೆಗಳನ್ನು ಸ್ವೀಕರಿಸುವುದರಿಂದ ಇದಕ್ಕೆ `ಕುಪ್ಪೆ ಪಂಜುರ್ಲಿ’ ಎಂಬುದಾಗಿ ಹೆಸರು ಬಂದಿದೆ ಎಂದು ಹೇಳುತ್ತಾರೆ.
`ವರ್ನರೆ ಪಂಜುರುಳಿ’ ಭೂತದ ಆರಾಧನೆ ಸಮಯದಲ್ಲಿ ದರ್ಶನ ಬಂದಾಗ ಕಾಲೂರಿ ನಿಲ್ಲದೆ ನೆಲದ ಮೇಲೆ ಹೊರಳಾಡುತ್ತಾನೆ. ಆ ಸಮಯದಲ್ಲಿ ಕೈಯಲ್ಲಿ ಕೋಳಿಯನ್ನು ಹಿಡಿದಿರುತ್ತಾನೆ. ಪ್ರತಿ ನುಡಿಗಟ್ಟನ್ನು ಗಾಯಗೊಂಡ ಹಂದಿ ನರಳುವಂತೆ ನರಳುತ್ತಾ ಪ್ರಾರಂಭಮಾಡುತ್ತಾನೆ. ಈ ಭೂತಾರಾಧನೆಯ ಮುಕ್ತಾಯವನ್ನು `ಭೂತ ಬಿರಿಯುವುದು’ ಎಂದು ಕರೆಯುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಹೆಸರಾದ ದೈವ `ಶಿರಾಡಿ ಭೂತ’. ದುಶ್ಯಾಸನದ ವಧೆಗಾಗಿ ಶಿವನು ಭೀಮನಿಗೆ ಕೊಟ್ಟ ಮೂರು ಘಳಿಗೆ ಕೋಪದ ರೂಪವೇ `ಶಿರಾಡಿ ಭೂತ’ ಎನ್ನುತ್ತಾರೆ! ಇದರ ಇತಿಹಾಸ ಪಾಡ್ದನದ ರೂಪದಲ್ಲಿಯೇ ಉಳಿದುಕೊಂಡು ಬಂದಿದೆ. ಶಿರಾಡಿ ಭೂತದ ವೇಷ ಧರಿಸುವವನು ಕಿರೀಟ, ಬಲಗೈಯಲ್ಲಿ ಕತ್ತಿ, ಚಾಮರ, ಎಡಗೈಯಲ್ಲಿ ಮಣಿಸರ, ಅರತಾಳ, ಮಸಿ, ತೆಂಗಿನಸಿರಿ, ಕಾಲಿಗೆ ಗಗ್ಗರ, ತೋಳಿಗೆ ಬಳೆ ಧರಿಸಿರುತ್ತಾನೆ. ದೇಹವನ್ನು ಕೇಪಾಳದ ಹೂಗಳಿಂದ ಅಲಂಕಾರ ಮಾಡಿಕೊಂಡಿರುತ್ತಾನೆ.
ತೆಂಬರ, ಚಂಡೆ, ಕೊಂಬು, ಕಹಳೆ ಮೊದಲಾದವು ಸಾಮಾನ್ಯವಾಗಿ ಭೂತರಾಧನೆಯ ಸಂದರ್ಭದಲ್ಲಿ ಬಳಸುವ ವಾದ್ಯಗಳು.

See also  ದೈವಾಲಯ ಅಭಿಯಾನ

ಧೈರ್ಯ, ಶೌರ್ಯ, ಸಾಮರ್ಥ್ಯಗಳಿಂದ ಬದುಕಿ ಕಾರಣಾಂತರದಿಂದ ಅಕಾಲ ಮರಣಕ್ಕೀಡಾದ ಸೋದರರಿಬ್ಬರು `ಉಲ್ಲಾಕಳು ಭೂತ’ಗಳು. ಇವರ ಮರಣದ ನಂತರ ಈ ವೀರರ ಮೇಲಿಟ್ಟ ಪ್ರೀತಿ ವಿಶ್ವಾಸ ಆರಾಧನೆಗಾಗಿ ರೂಪಗೊಂಡಿತು. ಈ ವೇಷ ಧರಿಸುವವರು ಪ್ರಭಾವಳಿ ರೀತಿಯಲ್ಲಿರುವ ಪಂಚ ಲೋಹದಿಂದ ಮಾಡಿದ ಶ್ರೀಮುಡಿಯನ್ನು ಧರಿಸುತ್ತಾರೆ.

`ಕೊರ್‍ದಬ ‘ ಅಥವಾ `ಕೋಟಿದ ಬಬ್ಬು’ ಹರಿಜನ ವೀರ ಮತ್ತು ಮಂತ್ರವಾದಿ. ಇವನ ಕಥೆ ಸ್ವಾರಸ್ಯ ಪೂರ್ಣವಾಗಿದೆ. ಹರಿಜನರ ವರ್ಗವಾದ `ನಳಿಕೆ’ ಜಾತಿಯವರು ಈ ಭೂತಕೋಲವನ್ನು ಕಟ್ಟುತ್ತಾರೆ. ಕಲಾವಿದರು ತೆಂಗಿನಸಿರಿ, ಅರದಾಳ, ಮಸಿ, ಗುಂಡುಮಣಿ, ಗಗ್ಗರ, ಎದೆಗೆ ಕಟ್ಟುವ ಅಂಗಿ, ಸುರುವಾಲು (ಪೈಜಾಮದ ರೀತಿಯಲ್ಲಿದ್ದು ಕಾಲ ಬಳಿ ಬಿಗಿಯಾಗಿರುತ್ತದೆ), ತಲೆಗೆ ಸಿರಿಯಲ್ಲೇ ಮಾಡಿದ ಶಿರೋಭೂಷಣ, ಕೈಯಲ್ಲಿ ಮಣಿ, ಕತ್ತಿ, ಚಾಮರ, ತಲೆಪಟ್ಟಿ, ನಡುಪಟ್ಟಿಗಳಿಂದ ಅಲಂಕರಿಸಿಕೊಳ್ಳುತ್ತಾರೆ. ಆರಾಧನೆಯ ಸಂದರ್ಭದಲ್ಲಿ ವೇಷ ತೊಟ್ಟವನಿಗೆ ದರ್ಶನ ಬಂದಾಗ ಕತ್ತಿಯಿಂದ ೧೬ ಬಾರಿ ಹಣೆಗೆ ಕಡಿದುಕೊಳ್ಳುತ್ತಾನೆ. ಈ ಸಂದರ್ಭದಲ್ಲಿ ಹದಿನಾರು ತೊಟ್ಟು ರಕ್ತ ಭೂಮಿಯ ಮೇಲೆ ಬೀಳಬೇಕು. ಇದರ ಪೂಜೆ ನಡೆಯುವುದು ನಿರ್ದಿಷ್ಟವಾದ ಸ್ಥಳದಲ್ಲಿ ಮಾತ್ರ.

ತುಳುನಾಡಿನಲ್ಲಿ ಜನಪ್ರಿಯವಾಗಿರುವ ಆರಾಧನೆ `ಬೈದರ್ಕಳ ನೇಮ’. ಈ ನಾಡಿನಲ್ಲಿ ಶೌರ್ಯದಿಂದ ಬದುಕನ್ನು ಬಡೆಸಿದ ವೀರಪುರುಷರಾದ ಕೋಟಿ ಚನ್ನಯ ಇವರ ಆರಾಧನೆಯನ್ನೇ ಬೈದರ್ಕಳ ನೇಮ ಎಂದು ಕರೆಯುತ್ತಾರೆ. ಈ ನೇಮದ ಸಂದರ್ಭದಲ್ಲಿ ಹರಿಜನರ ವರ್ಗವಾದ ಪರವ ಮತ್ತು ಪೂಜಾರರು ಭಾಗವಹಿಸುತ್ತಾರೆ. ಕೋಟಿ ಪೂಜಾರಿ ಮತ್ತು ಚನ್ನಯ ಪೂಜಾರಿ ಇವರಿಬ್ಬರು ಅವಳಿ ಮಕ್ಕಳು. ಆರಾಧನೆಯ ಸಮಯದಲ್ಲಿ ಅಪ್ಪಯ್ಯ ಬೈದಿ ಭಾಗವಹಿಸುತ್ತಾನೆ. ಈ ಮೂವರು ಬರಿಮೈಯಲ್ಲಿದ್ದು ಬಿಳಿ ಕಚ್ಚೆ ಪಂಚೆ, ತಲೆಗೆ ರುಮಾಲು, ಕೆಂಪು ನಡುಪಟ್ಟಿ, ಕೊರಳಿಗೆ ಹೂವಿನಹಾರ, ಕೈಯಲ್ಲಿ ಕತ್ತಿ, ಚಾಮರ ಹಿಡಿದಿರುತ್ತಾರೆ. ಕೋಟಿ ಚನ್ನಯ ಮತ್ತು ಅಪ್ಪಯ ಬೈದಿಯ ಭೂತ ವೇಷಧಾರಿಗಳು ಕಿರೀಟ, ನಿಲುವಂಗಿ, ಅರದಾಳ, ತೆಂಗಿನಸಿರಿ, ಗಗ್ಗರ ನಡುಪಟ್ಟಿ, ಎದೆಪಟ್ಟಿ, ಕೈಪಟ್ಟಿ, ಕೈಯಲ್ಲಿ ಕತ್ತಿ ಹಾಗೂ ಚಾಮರದಿಂದ ಅಲಂಕೃತರಾಗಿರುತ್ತಾರೆ. ಪ್ರಾರಂಭದಲ್ಲಿ ಕೋಟಿ ಚನ್ನಯ ಗರಡಿಯ ಮುಂಭಾಗದಲ್ಲಿ ಕೋಟಿ, ಚನ್ನಯ, ಅಪ್ಪಯ್ಯ ಬೈದಿ ಇವರಿಗೆ ದರ್ಶನ ಬಂದು ಕೊಂಬು, ಕಹಳೆ, ತೆಂಬರೆ, ಡೋಲು ಇತ್ಯಾದಿ ವಾದ್ಯಗಳ ಗತ್ತಿಗೆ ಆವೇಶಯುತವಾಗಿ ಕುಣಿಯುತ್ತಾರೆ. ನಂತರ ಗಂಧ ಧೂಪಗಳಿಂದ ಬೈದರ್ಕಳ ದೇವಾಲಯದ ಒಳಭಾಗದಿಂದ ಪಂಜು ಹಿಡಿದು ವಾದ್ಯದೊಂದಿಗೆ ಕೋಟಿ, ಚನ್ನಯ್ಯರನ್ನು ಪ್ರದಕ್ಷಿಣೆ ಹಾಕಿ ದೇವಸ್ಥನದ ಮುಂಭಾಗದಲ್ಲಿ ಚಪ್ಪರಕ್ಕೆ ಭೂತವೇಷಧಾರಿಗಳು ಬರುತ್ತಾರೆ. ದರ್ಶನ ಬಂದ ಸಮಯದಲ್ಲಿ ಕೋಟಿ ಭೂತವೇಷಧಾರಿಯು ಕೈಯಲ್ಲಿ ಪಂಜುನ್ನು ಹಿಡಿದುಕೊಂಡು ಗ್ರಾಮದ ಮುಖಂಡರೊಂದಿಗೆ ಸಂಭಾಷಣೆ ಮಾಡುತ್ತದೆ. ನಂತರ ಮೂವರು ವೇಷಧಾರಿಗಳು ಸರದಿ ಪ್ರಕಾರ ಆವೇಶದಿಂದ ಕುಣಿಯುತ್ತಾರೆ.
ಇಷ್ಟೇ ಅಲ್ಲದೆ ಜಾರಂದಾಯ ದೈವ, ಜಟ್ಟಿಗ, ಚೊಬ್ಬಯ್ಯ, ಮಾಣಿ, ಉಂಬಲಿ, ದುಗ್ಗಿಲ್ಲಾಯ, ಧೂಮಾವತಿ, ಜುಮಾದಿ, ಕೊಡ ಮುಂತಾಯ, ವಿಷ್ಣುಮೂರ್ತಿ ಮುಂತಾದ ಭೂತಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂತಾರಾಧನೆ ಜನಜೀವನದಲ್ಲಿ ಅವಿಭಾಜ್ಯ ಸಂಪ್ರದಾಯವಾಗಿ ಬೆಳೆದುಬಂದಿದೆ. ಭೂತಗಳ ಕ್ರೂರ ದೃಷ್ಟಿಯಿಂದ ಅವುಗಳನ್ನು ಒಲಿಸಿಕೊಳ್ಳಲು ಭಯಭಕ್ತಿಯಿಂದ ಹತ್ತಾರು ಬಗೆಯಲ್ಲಿ ಪೂಜಿಸುತ್ತಾ ಬಂದಿದ್ದಾರೆ. ಹೀಗೆ ಪ್ರಚಲಿತವಿರುವ ವಿವಿಧ ಭೂತದ ಕೋಲಗಳೆಲ್ಲ ಪೂರ್ಣವಾಗಿ ಧಾರ್ಮಿಕ ನಂಬಿಕೆಯ ಆಚರಣೆಗಳಾದರೂ, ವಾದ್ಯಗಳ ಗತ್ತಿಗೆ ಭೂತವೇಷಧಾರಿಗಳು ಕುಣಿಯುವುದರಿಂದ ಕಲೆಯ ಅಂಶವನ್ನು ಪಡೆದಿವೆ.

See also  Daivonthakana Nadubettu

Related videos


Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?