‘ಏಳಿ ಎದ್ದೇಳಿ, ಗುರಿ ಮುಟ್ಟುವವರೆಗೆ ನಿಲ್ಲದಿರಿ’ ಎಂಬ ವಾಕ್ಯ ಗಾಢ ನಿದ್ರೆಯಲ್ಲಿದ್ದರನ್ನೂ ಬಡಿದೆಬ್ಬಿಸಬಲ್ಲದು. ಗುರಿಯೆಡೆಗೆ ಮುನ್ನಡೆಸಬಲ್ಲದು. ಸ್ವಾಮಿ ವಿವೇಕಾನಂದರ ಇಂತಹ ಧೀರವಾಣಿಗಳೇ ಸ್ವಾತಂತ್ರ್ಯದ ಕೆಚ್ಚನ್ನು ಹಚ್ಚಿ ಹೋರಾಟದ ಕಾವನ್ನು ಹೆಚ್ಚಿಸಿದವು. ಅದರ ಪರಿಣಾಮವಾಗಿ, ಸಾವಿರಾರು ಜನರು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು. ದಟ್ಟ ದರಿದ್ರ ಸ್ಥಿತಿಯಲ್ಲಿದ್ದ ಸಮಾಜಬಂಧುಗಳು ಒಂದೆಡೆಯಾದರೆ, ಸಿರಿವಂತಿಕೆಯಲ್ಲಿ ಮೆರೆಯುತ್ತಿದ್ದವರು ಇನ್ನೊಂದೆಡೆ. ಆಗಲೂ ಅಂತಹ ಸ್ಥಿತಿ ಸಮಾಜದಲ್ಲಿತ್ತು. ಇದನ್ನು ಸ್ಪಷ್ಟವಾಗಿ ಖಂಡಿಸಿ, ‘ದರಿದ್ರದೇವೋ ಭವ’ ಎಂಬ ಸಂದೇಶವನ್ನು ಸಮಾಜಕ್ಕೆ ನೀಡಿದ ಸಂತ ಸ್ವಾಮಿ ವಿವೇಕಾನಂದರು. ಸಮಾಜ ಸೇವೆಯಲ್ಲಿ ನಿರತವಾಗಿರುವ ಸಾವಿರಾರು ವ್ಯಕ್ತಿಗಳಿಗೆ, ಸಂಸ್ಥೆಗಳಿಗೆ ಅವರ ಈ ಮಾತುಗಳೇ ಪ್ರೇರಣೆ. ಎಲ್ಲರೂ ಉತ್ತಮರಾಗಬೇಕು ಹಾಗೂ ಉಪಕಾರಿಗಳಾಗಬೇಕು ಎಂಬುದೇ ಅವರ ಸಂದೇಶದ ಸಾರ.
ಯುವಜನರು ಕ್ರಿಯಾಶೀಲರೂ, ಶಕ್ತಿವಂತರೂ, ಸಮಾಜೋಪಯೋಗಿಗಳೂ ಆಗಬೇಕೆನ್ನುವುದು ಅವರ ಆಶಯವಾಗಿತ್ತು. ಅವರ ಜನ್ಮದಿನವಾದ ಜನವರಿ 12 ನ್ನು ಪ್ರತಿವರ್ಷವೂ ‘ರಾಷ್ಟ್ರೀಯ ಯುವದಿನ’ ಎಂದು ಆಚರಿಸಲಾಗುತ್ತಿದೆ.