ದೇಶಕ್ಕಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟು 28 ವರ್ಷಗಳ ಸುಧೀರ್ಘ ದೇಶಸೇವೆಯನ್ನು ಸಲ್ಲಿಸಿ, ಗಡಿಯಲ್ಲಿ ಹಗಲಿರುಳು ಸೇವೆಗೈದು ನಿವೃತ್ತಿ ಹೊಂದಿ ತಮ್ಮ ಹುಟ್ಟೂರಾದ ಇಚ್ಲಂಪಾಡಿಗೆ ಆಗಮಿಸುತ್ತಿರುವ ನಿವೃತ್ತ ಸೈನಿಕ ಸುಭೇದಾರ್ ಮಧು ಕುಮಾರ್ ಮಾನಡ್ಕ ಅವರಿಗೆ ದಿನಾಂಕ 12.05.2024ರ ಭಾನುವಾರದಂದು ಸಂಜೆ 5.00 ಗಂಟೆಗೆ ಸರಿಯಾಗಿ ಶ್ರೀ ಸಿದ್ದಿವಿನಾಯಕ ಭಜನಾ ಮಂದಿರ ನೇರ್ಲದಿಂದ ಮೆರವಣಿಗೆಯ ಮೂಲಕ ಶ್ರೀ ಗಂಗಾಧರೇಶ್ವರ ದೇವಸ್ಥಾನಕ್ಕೆ ಸಾಗಿ ವಠಾರದಲ್ಲಿ ಗ್ರಾಮಸ್ಥರಿಂದ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತಾರೆ.
ಕಳೆದ 28ವರ್ಷಗಳಿಂದ ಭಾರತೀಯ ಭೂಸೇನೆಯಲ್ಲಿ ಯೋಧರಾಗಿ ಸಲ್ಲಿಸುತ್ತಿರುವ ಇಚ್ಲಂಪಾಡಿ ಗ್ರಾಮದ ಮಾನಡ್ಕ ನಿವಾಸಿ ಸುಭೇದಾರ್ ಮಧು ಕುಮಾರ್ ಅವರು ಎ.30ರಂದು ನಿವೃತ್ತರಾಗಿದ್ದಾರೆ. 26-04-1996ರಂದು ಭೂ ಸೇನೆಗೆ ಸೇರಿದ್ದ ಮಧುಕುಮಾರ್ ಅವರು ಬೆಂಗಳೂರಿನ ಸೇನಾ ವಿಭಾಗದಲ್ಲಿ ತರಬೇತಿ ಮುಗಿಸಿ 1998ರಲ್ಲಿ ಉತ್ತರ ಪ್ರದೇಶದ ಬರೇಲಿಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಆ ಬಳಿಕ ರಾಜಸ್ತಾನ, ಅಸ್ಸಾಂ, ಜಮ್ಮು ಕಾಶ್ಮೀರ, ಮೀರತ್, ಸಿಕಂದರಾಬಾದ್, ಲೇಹ್-ಲಡಾಖ್, ಪಶ್ಚಿಮ ಬಂಗಾಳ ಹಾಗೂ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದರು. 11ನೇ ರಾಷ್ಟ್ರೀಯ ರೈಫಲ್ಸ್, Special Frontier Force ಹಾಗು Public relation office (Ministry of Defence)ಗುವಾಹಟಿಯಲ್ಲೂ ವಿಶೇಷ ಸೇವೆ ಸಲ್ಲಿಸಿದ್ದಾರೆ. 1999ರ ಕಾರ್ಗಿಲ್ ಯುದ್ಧದ ವೇಳೆಯಲ್ಲಿ(6 Mountain Division, Sonamarg) ಶ್ರೀನಗರದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. 2017ರಲ್ಲಿ ಜೂನಿಯರ್ ಕಮಿಷನರ್ ಆಫೀಸರ್(JCO) ಆಗಿ ಪದೋನ್ನತಿ ಪಡೆದುಕೊಂಡಿದ್ದರು.
ಇವರು ಇಚ್ಲಂಪಾಡಿ ಗ್ರಾಮದ ಮಾನಡ್ಕ ನಿವಾಸಿ ನಿವೃತ್ತ ಸೈನಿಕ ದಿ.ಗೋಪಿನಾಥನ್ ನಾಯರ್ ಹಾಗೂ ಲಕ್ಷ್ಮಿ ಕುಟ್ಟಿ ದಂಪತಿಯ ಪುತ್ರ. ಇವರ ಸಹೋದರ ಮನೋಜ್ ಕುಮಾರ್ ಅವರು ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಇನ್ನೋರ್ವ ಸಹೋದರ ಮಹೇಶ್‌ಕುಮಾರ್ ಕೃಷಿಕರಾಗಿದ್ದಾರೆ. ಮಧುಕುಮಾರ್ ಅವರ ಪತ್ನಿ ಸುಷ್ಮಾ ಶಿವಮೊಗ್ಗ ಆನಂದಪುರ ಸರಕಾರಿ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಕಿಯಾಗಿದ್ದಾರೆ. ಪುತ್ರಿಯರಾದ ಸಮನ್ವಿ, ಮನಸ್ವಿ ವ್ಯಾಸಂಗ ಮಾಡುತ್ತಿದ್ದಾರೆ.