ಮಾಧ್ಯಮ ಅಭಿವ್ಯಕ್ತಿ ಮತ್ತು ಸಾಮಾಜಿಕ ಹೊಣೆಗಾರಿಕೆ

ಶೇರ್ ಮಾಡಿ

ನಾಗರಿಕತೆಯ ಬೆಳವಣಿಗೆಯಲ್ಲಿ ಮತ್ತು ಮಾನವನ ಅಭ್ಯುದಯದ ಹಾದಿಯಲ್ಲಿ ಸಂವಹನ ಕ್ರಿಯೆ ಮಹತ್ತರ ಪಾತ್ರ ವಹಿಸುತ್ತದೆ. ಎರಡು ಧೃವಗಳಲ್ಲಿರುವ ಜನಸಮುದಾಯಗಳನ್ನು ಪರಸ್ಪರ ಸಂಪರ್ಕ ಹೊಂದುವಂತೆ ಮಾಡುವ ಸಂವಹನ ಕ್ರಿಯೆ ಸಮಾಜವನ್ನು ಒಂದುಗೂಡಿಸುವಲ್ಲಿ ಸಫಲವಾಗುತ್ತದೆ. ಸಂವಹನ ಕ್ರಿಯೆಗೆ ಪೂರಕವಾದ ಸಂಪರ್ಕ ಮಾಧ್ಯಮಗಳು ಈ ನಿಟ್ಟಿನಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ನಿಜ, ಆಧುನಿಕ ತಂತ್ರಜ್ಞಾನ ಸಾಮಾಜಿಕ ವಲಯದಲ್ಲಿ ಸಂವಹನವನ್ನು ಜಂಗಮ ಸ್ವರೂಪಿಯಾಗಿಸಿದ್ದು ವ್ಯಕ್ತಿಗಳ ನಡುವೆ ನೇರಾನೇರ ಸಂಪರ್ಕ ಸಾಧಿಸಲು ನೆರವಾಗಿದೆ. ಇಂದು ಜಗತ್ತಿನ ಮತ್ತೊಂದು ತುದಿಯಲ್ಲಿ ನಡೆಯುವ ಘಟನೆಗಳ ಬಗ್ಗೆ ತಿಳಿಯಲು ಯಾವುದೇ ಒಂದು ನೆಲೆಯನ್ನು ಹುಡುಕುವ ಅವಶ್ಯಕತೆ ಇಲ್ಲ. ಎಲ್ಲವೂ ತಂತ್ರಜ್ಞಾನದ ಚೌಕಟ್ಟಿನಲ್ಲಿ ಪಸರಿಸುತ್ತಿದೆ. ವಿದ್ಯುನ್ಮಾನ ಕ್ಷೇತ್ರದಲ್ಲಿನ ಕ್ರಾಂತಿಕಾರಿ ಬೆಳವಣಿಗೆಗಳು ಸುದ್ದಿ ಸಂಗ್ರಹ ಪ್ರಕ್ರಿಯೆಯನ್ನು ಬೆರಳ ತುದಿಯಲ್ಲಿನ ವಿದ್ಯಮಾನವನ್ನಾಗಿ ಮಾಡಿದೆ. ವ್ಯಕ್ತಿಗತ ಅಗತ್ಯತೆ ಮತ್ತು ಆದ್ಯತೆಗಳನ್ನೂ ಲೆಕ್ಕಿಸದೆ ಇಂದು ಜಗತ್ತಿನ ಸುದ್ದಿ ವಾಟ್ಸಪ್, ಫೇಸ್‍ಬುಕ್, ಟ್ವಿಟರ್ ಮೂಲಕ ಎಲ್ಲರನ್ನು ತಲುಪುತ್ತಿರುವುದು ಸಂವಹನ ಕ್ರಿಯೆಯ ಒಂದು ಬೃಹತ್ ಹೆಜ್ಜೆ ಎನ್ನಬಹುದು. ಆದರೆ ಆಧುನಿಕ ಜಗತ್ತು ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರೆದಿದ್ದರೂ ಸಂವಹನ ಪ್ರಕ್ರಿಯೆ ಇನ್ನೂ ಸಾರ್ವತ್ರಿಕ ದೃಷ್ಟಿಕೋನವನ್ನು ಹೊಂದಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ಗುರುತಿಸಬಹುದು.
ಸ್ವತಂತ್ರ ಅಭಿವ್ಯಕ್ತಿ, ನಿಷ್ಪಕ್ಷಪಾತ ವರದಿ, ಪ್ರಾಮಾಣಿಕ ವಿಶ್ಲೇಷಣೆ, ಪಾರದರ್ಶಕ ಧೋರಣೆ ಮತ್ತು ಜನಪರ ಕಾಳಜಿ ಮಾಧ್ಯಮಗಳ ಮೂಲ ಮಂತ್ರಗಳಾಗಬೇಕು ಎಂದರ್ಥ. ಆದರೆ ಭಾರತದ ಮಾಧ್ಯಮ ಲೋಕ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದೆ. 1970ರ ದಶಕದ ವಿದ್ಯಮಾನಗಳ ಹಿನ್ನೆಲೆಯಲ್ಲಿ ಕಂಡುಬಂದಿದ್ದ ಮಾಧ್ಯಮಗಳ ಕ್ರಿಯಾಶೀಲತೆ, ಸಂವೇದನೆ ಮತ್ತು ಸಾಮಾಜಿಕ ಬದ್ಧತೆಯನ್ನು ಪ್ರಸ್ತುತ ಸಂದರ್ಭದಲ್ಲಿ ಕಾಣಲಾಗುತ್ತಿಲ್ಲ.
ಈ ಬೆಳವಣಿಗೆಗೆ ಕಾರಣಗಳನ್ನು ಗ್ರಹಿಸಲು ಭೂತಗನ್ನಡಿ ಬೇಕಿಲ್ಲ. ಔದ್ಯಮಿಕ ಹಿತಾಸಕ್ತಿ, ರಾಜಕೀಯ ಒಲವು, ಕಾರ್ಪೋರೇಟ್ ರಾಜಕಾರಣ ಮತ್ತು ಲಾಭ ಗಳಿಕೆಯ ಹಪಾಹಪಿ ಆವರಿಸುವ ಎಲ್ಲ ಕ್ಷೇತ್ರಗಳೂ ಬಹುಶಃ ಹೀಗೆಯೇ ಇರುತ್ತವೆ. ಮೂರು ನಾಲ್ಕು ದಶಕಗಳ ಹಿಂದೆ ಮುದ್ರಣ ಮಾಧ್ಯಮಗಳೇ ಪ್ರಧಾನವಾಗಿದ್ದ ಸಂದರ್ಭದಲ್ಲಿಯೂ ಔದ್ಯಮಿಕ ಹಿತಾಸಕ್ತಿ ಪ್ರಧಾನವಾಗಿತ್ತು. ಮಾಧ್ಯಮ ಸಮೂಹಗಳು ರಾಜಕೀಯ ನಿಲುವುಗಳಲ್ಲೂ ಸಹ ತಮ್ಮದೇ ಆದ ಆಯ್ಕೆಯನ್ನು ಪ್ರದರ್ಶಿಸುತ್ತಿದ್ದವು. ಆದರೆ ಅಂದಿನ ಮಾಧ್ಯಮಗಳಿಗೆ ರಾಜಕೀಯ ಉದ್ದೇಶ ಅಥವಾ ರಾಜಕೀಯ ಹಿತಾಸಕ್ತಿಗಳು ಪ್ರಧಾನವಾಗಿರಲಿಲ್ಲ. ಹಾಗಾಗಿಯೇ 1970ರ ದಶಕದ ಬೆಳವಣಿಗೆಗಳಿಗೆ ಮುದ್ರಣ ಮಾಧ್ಯಮಗಳು ಸಾಕ್ಷಿ ಪ್ರಜ್ಞೆಗಳ ಸ್ವರೂಪದಲ್ಲಿ ಜನಸಾಮಾನ್ಯರ ದನಿಯಾಗಿದ್ದವು. ಬೆಲೆ ಏರಿಕೆ, ನಿರುದ್ಯೋಗ, ತುರ್ತುಪರಿಸ್ಥಿತಿ, ಯುದ್ಧ ವಿರೋಧಿ ಧೋರಣೆ, ಮಹಿಳಾ ಸ್ವಾತಂತ್ರ್ಯ, ದಲಿತ ಚಳುವಳಿ, ಬಂಡಾಯ, ಎಡಪಂಥೀಯ ಚಳುವಳಿ, ಕಾರ್ಮಿಕ ಚಳುವಳಿ ಹೀಗೆ ವಿಭಿನ್ನ ನೆಲೆಗಳ ಸಾಮಾಜಿಕ ಅಭಿವ್ಯಕ್ತಿಗೆ ಮಾಧ್ಯಮಗಳು ಬೌದ್ಧಿಕ ನೆಲೆಯಾಗಿ ಪರಿಣಮಿಸಿದ್ದವು.
ದ್ವೇಷ ರಾಜಕಾರಣ, ಮತಾಂಧತೆ, ಸಾಮಾಜಿಕ ಕ್ಷೋಭೆ, ಜಾತಿ ದ್ವೇಷ, ನಿರುದ್ಯೋಗ, ಬಡತನ, ಜಾತಿ ದೌರ್ಜನ್ಯ, ಮಹಿಳೆಯರ ಮೇಲಿನ ದೌರ್ಜನ್ಯ, ಸಾಮಾಜಿಕ ತಾರತಮ್ಯ ಇವೆಲ್ಲವೂ ಭಯೋತ್ಪಾದನೆಗಿಂತಲೂ ಗಂಭೀರವಾದ ಸಮಸ್ಯೆಗಳು. ಭಯೋತ್ಪಾದನೆ ಒಂದು ಸಾಂಕ್ರಾಮಿಕ ಸೋಂಕು ರೋಗ. ಈ ಸಮಸ್ಯೆಗಳು ಆಂತರಿಕವಾಗಿ ಉಲ್ಬಣಿಸುವ ಅರ್ಬುಧ ರೋಗ. ಈ ರೋಗ ನಿವಾರಣೆಗೆ ಶ್ರಮಿಸಬೇಕಾದ ವಿದ್ಯುನ್ಮಾನ ಮಾಧ್ಯಮಗಳು ಮನರಂಜನೆಯ ಚೌಕಟ್ಟಿನಲ್ಲಿ, ಮುದ್ರಣ ಮಾಧ್ಯಮಗಳು ಅಸ್ತಿತ್ವದ ಚೌಕಟ್ಟಿನಲ್ಲಿ ಬಂಧಿಯಾಗಿರುವುದು ಈ ದೇಶದ ದುರಂತ. 2100ರಲ್ಲಿ, ಇನ್ನು 83 ವರ್ಷಗಳ ನಂತರ ಜಗತ್ತು ವಿನಾಶದತ್ತ ಸಾಗುತ್ತದೆ ಎಂಬ ಕಲ್ಪಿತ ವಿಚಾರವನ್ನು ರಂಗುರಂಗಾಗಿ ಬಿತ್ತರಿಸುವ ಮಾಧ್ಯಮಗಳಿಗೆ, ತಮ್ಮ ಸುತ್ತಲಿನ ಸಮಾಜದಲ್ಲಿ ಪ್ರಳಯಾಂತಕ ಸನ್ನಿವೇಶ ಸೃಷ್ಟಿಯಾಗುತ್ತಿರುವುದು ಏಕೆ ಕಾಣುತ್ತಿಲ್ಲ ? ಈ ಸನ್ನಿವೇಶಕ್ಕೆ ಯಾವುದೇ ಗ್ರಹಗತಿ ಕಾರಣವಲ್ಲ. ಆಳುವ ವರ್ಗಗಳು ಮತ್ತು ಪ್ರಭುತ್ವ ಪೋಷಿತ ಕಾರ್ಪೋರೇಟ್ ಜಗತ್ತು ಕಾರಣ. ಈ ವಾಸ್ತವವನ್ನು ವಸ್ತುನಿಷ್ಠವಾಗಿ ಜನಸಾಮಾನ್ಯರ ಮುಂದಿರಿಸುವ ಆತ್ಮ ಸ್ಥೈರ್ಯ ಮಾಧ್ಯಮಗಳಿಗೆ ಇರಬೇಕು .

See also  ಸಮಗ್ರ ಕೃಷಿ ಅಭಿಯಾನ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?