ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಕಾಫಿ ಟೀ ಕುಡಿಯುವ ಬದಲು ಇಂತಹ ಪಾನೀಯಗಳನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.
ಖಾಲಿ ಹೊಟ್ಟೆಗೆ ಕುಡಿಯಬೇಕಾದ ಪಾನೀಯಗಳು
ಬೆಳಗ್ಗೆ ಎದ್ದ ತಕ್ಷಣ, ಕೆಫೀನ್ ಅಂಶ ಹೆಚ್ಚಿರುವ ಕಾಫಿ ಅಥವಾ ಟೀ ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳುವ ಬದಲು, ಇದಕ್ಕೆ ಪರ್ಯಾಯವಾಗಿ ಕುಡಿಯಬಹುದಾದ, ಕೆಲವೊಂದು ಆರೋಗ್ಯಕರ ಪಾನೀಯಗಳ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡುತ್ತಿದ್ದೇವೆ ಮುಂದೆ ಓದಿ…
ನಿಂಬೆ ಪಾನೀಯ
ಖಾಲಿ ಹೊಟ್ಟೆಯಲ್ಲಿ ನಿಂಬೆ ರಸ ಹಿಂಡಿದ ಪಾನೀಯವನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಬಹಳ ಒಳ್ಳೆಯದು. ಏಕೆಂದರೆ ನಿಂಬೆಯಲ್ಲಿರುವ ವಿಟಮಿನ್ ಸಿ ಅಂಶ, ದೇಹದ ವಿಷಕಾರಿ ಅಂಶವನ್ನು ಹೊರ ಹಾಕಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಗ್ರೀನ್ ಟೀ ಕುಡಿಯಿರಿ
ಖಾಲಿ ಹೊಟ್ಟೆಗೆ ಟೀ-ಕಾಫಿ ಕುಡಿಯುವ ಬದಲು, ಗ್ರೀನ್ ಟೀ ಕುಡಿಯುವ ಅಭ್ಯಾಸವನ್ನು ಮಾಡಿಕೊಂಡರೆ ಒಳ್ಳೆಯದು. ಈ ಪಾನೀಯದಲ್ಲಿ ಕಂಡು ಬರುವ ಆಂಟಿ ಆಕ್ಸಿಡೆಂಟ್ ಅಂಶಗಳು ದೇಹದ ಕೊಬ್ಬಿನ ಅಂಶವನ್ನು ಕರಗಿಸಲು ನೆರವಾಗುತ್ತದೆ.
ಎಳನೀರು
ಎಲೆಕ್ಟ್ರೋಲೈಟ್ ಹಾಗೂ ಮೂತ್ರವರ್ಧಕ ಗುಣಲಕ್ಷಣಗಳು ಎಳ ನೀರಿನಲ್ಲಿ ಅಗಾಧ ಪ್ರಮಾಣದಲ್ಲಿ ಕಂಡು ಬರುವುದರಿಂದ, ಇದನ್ನು ಖಾಲಿ ಹೊಟ್ಟೆಗೆ ಕುಡಿದರೆ ದೇಹದಿಂದ ವಿಷಕಾರಿ ತ್ಯಾಜ್ಯಗಳು ಹೊರ ಹೋಗುತ್ತದೆ.
ಆಪಲ್ ಸೈಡರ್ ವಿನಿಗರ್
ಬೆಳಗಿನ ಸಮಯದಲ್ಲಿ ಉಪಹಾರಕ್ಕೆ ಮುಂಚೆ ಖಾಲಿ ಹೊಟ್ಟೆಗೆ, ಒಂದು ಚಮಚದಷ್ಟು ಆಪಲ್ ಸೈಡರ್ ವಿನೆಗರ್ ಅನ್ನು ಮಿಕ್ಸ್ ಮಾಡಿ ಕುಡಿದರೆ, ಟೈಪ್ 2 ಮಧುಮೇಹ, ಅತಿಯಾದ ಕೊಲೆಸ್ಟ್ರಾಲ್ ಹಾಗೂ ದೇಹದ ತೂಕ ನಿಧಾನಕ್ಕೆ ಕಡಿಮೆಯಾಗುತ್ತದೆ.
ಜೀರಿಗೆ ನೀರು
ಖಾಲಿ ಹೊಟ್ಟೆಗೆ ಜೀರಿಗೆ ನೆನೆಸಿಟ್ಟ ನೀರು ಕುಡಿಯುವುದರಿಂದ, ದೇಹದ ತೂಕ ಕಡಿಮೆಯಾಗುವುದರ ಜೊತೆಗೆ, ದೇಹದೊಳಗಿನ ವಿಷಕಾರಿ ಅಂಶಗಳು ಕೂಡ ಮೂತ್ರದ ಮೂಲಕ ಹೊರ ಹೋಗುತ್ತವೆ.
ಶುಂಠಿ ಚಹಾ
ಶುಂಠಿ ತನ್ನಲ್ಲಿ ಆಂಟಿ ಇನ್ಫಾಮೇಟರಿ ಗುಣಲಕ್ಷಣಗಳನ್ನು ಯಥೇಚ್ಛವಾಗಿ ಒಳಗೊಂಡಿರುವ ಕಾರಣ, ಬೆಳಗಿನ ಸಮಯದಲ್ಲಿ ಕಾಡುವ ವಾಕರಿಕೆ, ವಾಂತಿ ಆರೋಗ್ಯದ ಅಸ್ವಸ್ಥತೆ ಇತ್ಯಾದಿ ಸಮಸ್ಯೆಗಳನ್ನು ಸಹ ಇದು ಸರಿಪಡಿಸುತ್ತದೆ. ಹೀಗಾಗಿ ಖಾಲಿ ಹೊಟ್ಟೆಗೆ ಶುಂಠಿ ಚಹಾ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.
ಕಾಳುಮೆಣಸಿನ ಪುಡಿಯ ನೀರು
ಉಗುರುಬೆಚ್ಚಗಿನ ನೀರಿಗೆ ಚಿಟಿಕೆಯಷ್ಟು ಕಾಳುಮೆಣಸಿನ ಪುಡಿಯನ್ನು ಸೇರಿಸಿ ಕುಡಿಯುವುದರಿಂದ, ರೋಗನಿರೋಧಕ ಶಕ್ತಿ ಹೆಚ್ಚಾಗುವುದರ ಜೊತೆಗೆ, ದೇಹದಲ್ಲಿ ಶೇಖರಣೆಗೊಂಡಿರುವ ಕೊಬ್ಬಿನಾಂಶವು ಕೂಡ ಕಡಿಮೆಯಾಗುತ್ತದೆ.