ನನ್ನ ದೇಹಕ್ಕೆ ಗಂಡ ಹೆಂಡಿರಿಹರು
ನನಗೆ ಗಂಡ ಹೆಂಡತಿ ಬಂದುಗಳು
ಜಿನನೇಂದ …………………………………………………………………..ಅವ್ಯಕ್ತ
ಮಿಲನ ಜನ್ಮದಾತನ ಅಂದಿನ ಅಂಬೋಣ
ಜೈನರ ಮನ ಮನಗಳ ಮಿಲನ – ದೇಹ ದೇಹಗಳ ಮಿಲನವಾಗಿಹುದು
ಕಾವಲು ದಾರಿಯಾದ ಜೈನ ಮಿಲನವೆಂದ ………………………………..ಅವ್ಯಕ್ತ
ಜೈನರ ಗ್ರಂಥಗಳ ಗುಡ್ಡಗಳಿರುದಯ್ಯ
ಜೈನರ ಬಾಳಿನ ದಾರಿ ಕಾಣಿಪ
ಕಿರು ಹೊತ್ತಿಗೆ ಕೊರತೆ ಕಾಡುತ್ತಿದೆ ………………………………………….ಅವ್ಯಕ್ತ
ಜೈನರ ಸಂಘಟನೆಗಳ ಸಂಖ್ಯೆ ಏರುತಿಹುದು
ಜೈನರ ಭಾವನೆಗಳ ಸ್ಪಂದಿಪ ಸಂಘಟನೆಗಳ
ಜೈನರ ನಿರೀಕ್ಷೆ ಈಡೇರಿಸಲಾರೆಯ ………………………………………….ಅವ್ಯಕ್ತ
ತ್ಯಾಗಿಗಳ ಪೂಜಿಪ ಬೋಗಿಗಳ ವೇದಿಕೆ
ಜೈನ ಸಮಾಜವೆಂಬ ಅಣುಕು ಮಾತು
ಸತ್ಯವೇ ಮಿಥ್ಯವೇ ಪೇಳು ………………………………………………………..ಅವ್ಯಕ್ತ
ವೃದ್ಯಾಪದಿ ಸಾವು ಸಮೀಪಿಸದೊಡೆ
ರೋಗ ರುಜಿನ ಇಮ್ಮಡಿಸಿ ಅಂತ್ಯ ಅನಿವಾರ್ಯವಾದೊಡೆ
ಸಲ್ಲೇಖನ ವ್ರತಾದಿ ಅಮರಣದವ ಜೈನನೆಂದ ……………………………..ಅವ್ಯಕ್ತ
ಹುಟ್ಟು ಜೈನರ ಸಂಖ್ಯೆ ಏರುತಿಹುದು
ಆಚರಣೆ ಜೈನರ ಸಂಖ್ಯೆ ಇಳಿಯುತಿಹುದು
ಆಚರಣೆ ಜೈನರ ಮಲ್ಪ ಶಾಲೆ ಎಲ್ಲಿಹುದಯ್ಯ ………………………………….ಅವ್ಯಕ್ತ
ಸಮ್ಯಗ್ದರ್ಶನ ಜ್ಞಾನ ಚಾರಿತ್ರದ ಅರಿವಿಲ್ಲದೆ
ಮದು ಮಾಂಸ ಮದ್ಯ ತ್ಯಾಗ ವ್ರತ ಬೋದಿಪ ಗುರುವಿದ್ದೊಡೆ
ಜೈನ ಧರ್ಮ ಉಳಿಯುವುದೆಂತು ……………………………………………,ಅವ್ಯಕ್ತ
ಸಮ್ಯಗ್ದರ್ಶನದ ಬಾವಿ ಕೊರೆಯಿಸಿ
ಸಮ್ಯಜ್ಞಾನದ ಜಲ ಸಂಪ್ರೋಕ್ಷಿಸಿ
ಸಮ್ಯಕ್ಚಾರಿತ್ರದ ಬದುಕು ಬದುಕೆಂದ ………………………………………….. ಅವ್ಯಕ್ತ
ಓ ಬಾಹುಬಲಿ ನಿನ್ನ ಎತ್ತರಕ್ಕೆ ಏರದೆ
ನಿನ್ನ ಎತ್ತರ ಕುಗ್ಗಿಸಿ
ಮಾಲ್ಪ ಅಭಿಷೇಕ ಮಹಾಮಸ್ತಕಾಭಿಷೇಕವಾದೀತೇ ………………………….ಅವ್ಯಕ್ತ
ನಿಂತ ನೆಲ ಪರರದೆನ್ನುವಾತ
ಭೋಗ ಸುಖಕ್ಕಿಂತ ತ್ಯಾಗ ಸುಖ ಮಿಗಿಲೆಂಬುದಕೆ ನಿದರ್ಶನ
ಬಾಹುಬಲಿ ನಿನ್ನ ಆದರ್ಶ ಎನಗಿಲ್ಲವಯ್ಯಾ ……………………………………ಅವ್ಯಕ್ತ
ಕೂಡಿಡುವ ಆಶೆ ಎಮಗಿರೆ
ಕೂಡಿಟ್ಟುದ ಪರರಿಗೆ ಹಂಚುವ ಆಶೆ ನಿನಗಿರೆ
ಜಗದಿ ನಿನ್ನ ಪಾಲಿಪರು ವಸ್ತ್ರಧಾರಿ ಬಾಹುಬಲಿಗಳೆಂದ ………………………ಅವ್ಯಕ್ತ
ಸಮ್ಯಗ್ದರ್ಶನ ಜ್ಞಾನ ಚಾರಿತ್ರದಲ್ಲಿ ಮಿಂದು
ಪಂಚನಮಸ್ಕಾರ ಮಂತ್ರ ಪಠಿಸುತಿರೆ
ಜೈನರ ಬಾಳು ನಿತ್ಯಯೋತ್ಸವವೆಂದ ………………………………………..ಅವ್ಯಕ್ತ
ದರ್ಶನ ಜ್ಞಾನ ಸಹಿತ ಗ್ರಹಸ್ಥನ ಬಾಳು
ದರ್ಶನ ಜ್ಞಾನ ರಹಿತ ಚಾರಿತ್ರ ಸಹಿತ ಮುನಿಬಾಳಿಗೆ ಮಿಗಿಲಾಗೆ
ಗ್ರಹಸ್ಥ ಮೋಕ್ಷಗಾಮಿಗೆ ಅರ್ಹನೆಂದ …………………………………………ಅವ್ಯಕ್ತ
ಮಸ್ತಕದಿ ಸದಾ ನಿನ್ನ ನೆನೆಯದೆ
ಮಸ್ತಕಾಭಿಷೇಕ ನಾ ಮಾಳ್ಪಪೊಡೆ
ಅಜಾನುಬಾಹು ಬಾಹುಬಲಿಯ ದೇಹ ನೆನೆಯುವುದೆಂತು …………………..ಅವ್ಯಕ್ತ