ಆತ್ಮೀಯರೇ
ಅಖಂಡ ಭಾರತ ಭೂಮಿಯಲ್ಲಿ ಜನಿಸಿದ ನಾವೆಲ್ಲರೂ ಪುಣ್ಯವಂತರಲ್ಲವೇ ? ಹಾಗಿರುವಾಗ ನಮ್ಮನ್ನೆಲ್ಲಾ ತನ್ನ ಒಡಲಲ್ಲಿ ಹೊತ್ತುಕ್ಕೊಂಡು ನಾವು ಮಾಡಿದ ಅನಾಚಾರವನ್ನು ಸಹಿಸಿಕೊಂಡು ನಮಗೆ ಬದುಕಲು ಜಾಗವನ್ನು ಕೊಟ್ಟ ಭಾರತ ಮಾತೆಯನ್ನು ಹೆಣ್ಣೆಂದು ಕರೆಯುವುದಿಲ್ಲವೇ ? ಭೂಮಿಯನ್ನು ತಾಯಿ ಎನ್ನುವುದಿಲ್ಲವೇ ?.”ಹೆತ್ತ ತಾಯಿ ಹೊತ್ತನಾಡು ” ಸ್ವರ್ಗಕ್ಕಿಂತಲೂ ಮಿಗಿಲು ಎಂದು ಸಾರುತ್ತಿರುವ ಭಾರತೀಯರೇ ,ಇಂದು ನವದುರ್ಗೆಯರನ್ನು ದೇವಿ ಎಂದು ಪೂಜಿಸುವುದಿಲ್ಲವೇ .ಹಾಗಿರುವಾಗ ನಮ್ಮ ಮನೆಯಲ್ಲಿ ಜನಿಸಿದ ಹೆಣ್ಣು ಮಗುವಿನ ಮೇಲೆ ತಂದೆಗೆ ಅಥವಾ ಕುಟುಂಬದವರಿಗೆ ತಾತ್ಸಾರ ಏಕೆ ?
ಒಬ್ಬ ಹೆಣ್ಣು ಮಗಳು ಮದುವೆಯ ವಯಸ್ಸಿಗೆ ಬಂದು ಆಕೆ ಬೇರೆ ಮನೆಯ ಸೊಸೆಯಾಗಿ ಬಂದು ಪುರುಷನ ಪತ್ನಿಯಾಗಿ ತನ್ನೆಲ್ಲಾ ಅಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ಸಂಸಾರವನ್ನು ನಡೆಸುತ್ತಾಳೆ.ಹಿರಿಯರು “ಹೆಣ್ಣು ಸಂಸಾರದ ಕಣ್ಣು” ಎಂದು ಹೇಳಿದ್ದಾರೆ .ಆದರೆ ಈಗ ಅದೇ ಹೆಣ್ಣಿನ ಪರಿಸ್ಥಿತಿ ಎಲ್ಲಿ ಬಂದು ನಿಂತಿದೆ ನೀವೇ ಹೇಳಿ .ಅತ್ತೆಯಾಗಿ ಸಹೋದರಿಯಾಗಿ ತನ್ನ ಸ್ಥಾನವನ್ನು ತುಂಬುವ ಮಗಳಾಗಿ ಏಕೆ ಬೇಡ ? ಹೆಣ್ಣಿಲ್ಲದೆ ಸೃಷ್ಟಿಯು ಸಾಧ್ಯವೇ ? ಪುರಾಣದಲ್ಲಿ ಹೆಣ್ಣನ್ನು ಆದಿಶಕ್ತಿ ಎಂದು ಪೂಜಿಸುವವರು ಕಲಿಯುಗದಲ್ಲಿ ಯಾರೆಂಥ ಪರಿಸ್ಥಿತಿಗೆ ತಂದಿದ್ದಾರೆ .ಹೆಣ್ಣು ಎಂದರೆ ನುಂಗಲಾರದ ತುತ್ತು .ಹೆಣ್ಣು ಕುಂತರೂ ತಪ್ಪು ,ನಿಂತರೂ ತಪ್ಪು .ಯಾರೊಡನೆಯೂ ಮಾತನಾಡುವಂತಿಲ್ಲ ,ಅಕ್ಕಪಕ್ಕದವರಲ್ಲಿ ತನ್ನ ನೋವನ್ನು ಹೇಳಿಕೊಳ್ಳುವಂತಿಲ್ಲ .ಮದುವೆಯಾಗಿ ಕೆಲವೇ ತಿಂಗಳಲ್ಲಿ ವರದಕ್ಷಿಣೆಗಾಗಿ ಪೀಡಿಸಿ ಕೊನೆಗೆ ಅವಳನ್ನು ಆಸಿಡ್ ಅಥವಾ ಇನ್ನಾವುದರಿಂದಲೋ ಸಾಯಿಸಿ ಬಿಡುತ್ತಾರೆ .ಒಂದೇ ವಾರದಲ್ಲಿ ಜೈಲಿಂದ ಹೊರಬಂದು ಮತ್ತೆ ಇನ್ನೊಬ್ಬಳ ಜೊತೆ ಸಂಸಾರ ನಡೆಸುವ ರಾಕ್ಷಸರು ನಮ್ಮಲ್ಲಿ ಕಡಿಮೆ ಏನಿಲ್ಲ .ಹೆಣ್ಣಿನ ಬದುಕಿನಲ್ಲಿ ಚೆಲ್ಲಾಟವಾಡುವ ಮನುಷ್ಯರಿಗಿಂತ ಕಾಡಿನಲ್ಲಿರುವ ಪ್ರಾಣಿಗಳೇ ಎಷ್ಟೋ ಲೇಸು.ಕಾಮುಕರ ಕೆಂಗಣ್ಣಿಗೆ ಗುರಿಯಾಗುವ ಹೆಣ್ಣಿನ ಜೀವಕ್ಕೆ ಬೆಲೆ ಇಲ್ಲವೇ ?.ಹಸುಗೂಸುಗಳ ಮೇಲೆಯೇ ಅತ್ಯಾಚಾರ ನಡೆಸುವ ನರಕಾಮುಕರಿಗೆ ಮುಕ್ತಿಯಾವಾಗ ?ಇಂದು ವಿಶ್ವದ ನಂಬರ್ ೧ ರಾಷ್ಟ್ರ ಆಗಿರುವ ನಮ್ಮ ಭಾರತದಲ್ಲಿ ನಡೆಯುವ ಅತ್ಯಾಚಾರಗಳು ಎಷ್ಟರ ಮಟ್ಟಿಗೆ ಕಡಿಮೆಯಾಗಿದೆ ಎಂದು ನೀವೇ ಹೇಳಿ.ಹುಟ್ಟಿದ ಕೂಡಲೇ ಹೆಣ್ಣು ಮಗುವನ್ನೇ ಹೊಸಕಿ ಹಾಕುವ ಗಂಡಸರು ಮದುವೆಯಾಗಿದ್ದು ಹೆಣ್ಣನ್ನು ತಾನೇ ! ಹೆಣ್ಣನ್ನು ಭೋಗದ ವಸ್ತುವೆಂದು ತಿಳಿದಿರುವ ರಾಕ್ಷಸರಿಗೆ ಯಾರು ಶಿಕ್ಷೆ ನೀಡುವವರು .ಸೌಜನ್ಯ ,ನಿರ್ಭಯ ,ಪ್ರಿಯಂಕರಂತೆ ಹಲವಾರು ಸಹೋದರಿಯರ ಮೇಲೆ ನಡೆದ ಅತ್ಯಾಚಾರವನ್ನು ನೆನೆಸಿಕೊಂಡರೆ ನಮ್ಮ ರಕ್ತ ಕುದಿಯುವುದಿಲ್ಲವೇ? ಬೆಳಕಿಗೆ ಬಾರದೆ ಇರುವಂತ ಘಟನೆಗಳು ಇನ್ನೆಷ್ಟು ಇದೆಯೋ ಯಾರಿಗೆ ಗೊತ್ತು .ಓಬವ್ವ ,ಅಬ್ಬಕ್ಕ,ಚೆನ್ನಮ್ಮರಂತಹ ಹಲವಾರು ವೀರ ವನಿತೆಯರ ಸಾಹಸ ಕಥೆಯನ್ನು ಓದಿದ ನಾವು ನಮ್ಮಲೇ ನಡೆಯುವಂತಹ ದುಷ್ಕೃತ್ಯವನ್ನು ತಡೆಯಲು ಯಾಕೆ ಮುಂದಾಗುತ್ತಿಲ್ಲ .ತೊಟ್ಟಿಲು ತೂಗುವ ಕೈಗಳು ದೇಶವನ್ನೇ ಆಳಬಲ್ಲರು ಎಂಬುದಕ್ಕೆ ಸಾಕ್ಷಿಯಾದ ಪ್ರತಿಭಾ ಪಾಟೀಲ್ ,ಇಂದಿರಾ ಗಾಂಧಿ ಹೆಣ್ಣಲ್ಲವೇ ? ಕೇಂದ್ರ-ಹಣಕಾಸು-ಸಚಿವೆ ನಿರ್ಮಲಾ ಸೀತಾರಾಮನ್ ಹೆಣ್ಣಲ್ಲವೇ ? ನವದುರ್ಗೆಯನ್ನು ಆರಾಧನೆ ಮಾಡುವವರು ಇಂದು ಹೆಣ್ಣನ್ನು ಸಜೀವ ದಹನ ಮಾಡುವ ಪರಿಸ್ಥಿತಿಗೆ ತಲುಪಿದ್ದಾರೆ ಎಂದರೆ ಇದೆಂತಹಾ ವಿಪರ್ಯಾಸ .? ನೀಚ ಬುದ್ದಿಯ ನರಿಗಳೇ ನಿಮ್ಮನ್ನು ಹೆತ್ತಿದ್ದು ಒಬ್ಬ ಹೆಣ್ಣು ಎಂಬುದನ್ನು ಮರೆತು ಬಿಟ್ಟರೇ ? ಅತ್ಯಾಚಾರ ಎಸಗುವಾಗ ನಿಮ್ಮ ತಾಯಿ ತಂಗಿಯರ ನೆನಪಾಗಲಿಲ್ಲವೇ ? ಆ ಹೆಣ್ಣು ಮಕ್ಕಳ ಆರ್ತನಾದ ನಿಮಗೆ ಕೇಳಿಸಲಿಲ್ಲವೇ ?ನಿಮ್ಮ ಈ ಕೃತ್ಯಕ್ಕೆ ಯಾರೋ ಹೆತ್ತ ಮಗಳು ಏಕೆ ಬಲಿಯಾಗಬೇಕು.ನಿಮ್ಮ ಈ ಮಾನಗೇಡಿ ಕೃತ್ಯಕ್ಕೆ ಗಲ್ಲುಶಿಕ್ಷೆಯೂ ಕಡಿಮೆಯೇ.ಇನ್ನು ಮುಂದಾದರೂ ದುಷ್ಟ ಆಲೋಚನೆಗಳನ್ನು ಬಿಟ್ಟು ಸಂಸ್ಕಾರವಂತರಾಗಿ ಬದುಕಲು ಕಲಿಯಿರಿ .ದಯವಿಟ್ಟು ಹೆಣ್ಣನ್ನು ಬದುಕಲು ಬಿಡಿ .ಈ ಸುಂದರ ಸಮಾಜದಲ್ಲಿ ಅವಳನ್ನು (ನಮ್ಮನ್ನು) ಗೌರವಯುತವಾಗಿ ಬಾಳಲು ಬಿಡಿ.ಯಾಕೆಂದರೆ ನಾನು ಕೂಡ ಒಬ್ಬ ಹೆಣ್ಣು .ಹಾಗಾಗಿ ವಿನಂತಿಯನ್ನು ಮಾಡುತ್ತಿದ್ದೇನೆ .
ಪ್ರಿಯ ಸಹೋದರಿಯರೇ ,ನಾವೆಲ್ಲರೂ ಇನ್ನು ಮುಂದಾದರೂ ಎಚೆತ್ತುಕೊಳ್ಳದಿದ್ದರೆ ನಮ್ಮ ಆಸುಪಾಸಿನಲ್ಲಿ ಇಂತಹ ಘಟನೆಗಳು ನಡೆದರೆ ಇದನ್ನು ನಾವು ಹೇಗೆ ತಡೆಯಬಲ್ಲೆವು .ಆದುದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದ ಮೂಲಕ ಸಂಘಟಿತವಾಗಿ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕೋಣ .ಹೆಣ್ಣು ಮಕ್ಕಳನ್ನು ರಕ್ಷಿಸೋಣ .ಈ ಸಮಾಜದಲ್ಲಿ ನಮ್ಮ ಸ್ಥಾನ ಏನು ಎಂಬುದನ್ನು ಮನವರಿಕೆ ಮಾಡೋಣ “ಹೆಣ್ಣು ಸಂಸಾರದ ಕಣ್ಣು” ಎಂಬುದನ್ನು ಜಗತ್ತಿಗೆ ಸಾರಿ ಹೇಳೋಣ.ಇನ್ನು ಅದೆಷ್ಟು ಹೆಣ್ಣು ಮಕ್ಕಳು ಬಲಿಯಾಗುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ .ಈಗಾಗಲೇ ಇದಕ್ಕೆ ಬಲಿಯಾದ ನಮ್ಮೆ ದೇಶದ ಎಲ್ಲ ಸಹೋದರಿಯರ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡೋಣ .ಹೆತ್ತ ಕರುಳಿನ ಕಣ್ಣೀರನ್ನು ಒರೆಸುವ ಪ್ರಯತ್ನ ಮಾಡೋಣ .
IIಸರ್ವೇ ಜನ ಸುಖಿನೋ ಭವಂತು !!
ನಿಮ್ಮ ಸಹೋದರಿ
ಶ್ರೀಮತಿ ನಂದಾ ಶಾಂತಪ್ಪ ಗೌಡ .ಪಿ
ಧರ್ಮಶ್ರೀ ಜ್ಞಾನ ವಿಕಾಸ ಕೇಂದ್ರ
ಬೀಡುಬೈಲು ,ಇಚಿಲಂಪಾಡಿ ,ಕಡಬ ತಾಲೂಕು
ಮೊಬೈಲ್:8277773491